ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಭಾರತದ ಭೂ ಪ್ರದೇಶ ಆಕ್ರಮಿಸಿಕೊಂಡಿರುವ ಚೀನಾ ಪಡೆಗಳು
Last Updated 24 ಜನವರಿ 2021, 15:03 IST
ಅಕ್ಷರ ಗಾತ್ರ

ತಿರುಪುರ್: ತಮಿಳುನಾಡಿನ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಎರಡನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಭಾರತ ಭೂ ಪ್ರದೇಶವನ್ನು ಚೀನಾ ಪಡೆಗಳು ಆಕ್ರಮಿಸಿಕೊಂಡಿದ್ದರೂ, 56 ಇಂಚು ಎದೆಯುಳ್ಳ ಮನುಷ್ಯ ಮಾತ್ರ ನೆರೆರಾಷ್ಟ್ರದ ಹೆಸರನ್ನೂ ಉಚ್ಚರಿಸದೇ ಸುಮ್ಮನಿದ್ದಾರೆ’ ಎಂದು ಟೀಕಿಸಿದರು.

ಭಾನುವಾರ ಈರೋಡ್ ಜಿಲ್ಲೆಯಲ್ಲಿ ನಡೆದ ಸರಣಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಮಾತನಾಡಿದ ರಾಹುಲ್, ‘ಕೇಂದ್ರ ಸರ್ಕಾರವು ಈ ದೇಶದ ರೈತರು, ಕಾರ್ಮಿಕರು, ಸಣ್ಣ ಅಥವಾ ಉದ್ಯಮಗಳ ಪರವಾಗಿಲ್ಲ. ಮೋದಿ ನೇತೃತ್ವದ ಸರ್ಕಾರವು ಕೇವಲ ಐದಾರು ಉದ್ಯಮಿಗಳಿಗೆ ಮಾತ್ರವಿದೆ’ ಎಂಬ ಆರೋಪವನ್ನು ಪುನರುಚ್ಛರಿಸಿದರು.

‘ಇದೇ ಮೊದಲ ಬಾರಿಗೆ ದೇಶದ ಜನರು ಭಾರತದ ಭೂಪ್ರದೇಶವನ್ನು ಚೀನಾದ ಪಡೆಗಳು ಆಕ್ರಮಿಸಿಕೊಳ್ಳುತ್ತಿರುವುದನ್ನು ನೋಡುವಂತಾಗಿದೆ. ಆದರೆ, 56 ಇಂಚಿನಯ ಎದೆಯುಳ್ಳ ಆ ಮನುಷ್ಯ ಮಾತ್ರ ನೆರೆ ರಾಷ್ಟ್ರ ಚೀನಾದ ಹೆಸರನ್ನೂ ಹೇಳಲು ಸಿದ್ಧವಿಲ್ಲ. ಇದು ನಮ್ಮ ದೇಶದ ವಾಸ್ತವ ಸ್ಥಿತಿ’ ಎಂದು ಪ್ರಧಾನಿ ಹೆಸರು ಹೇಳದೇ ಪರೋಕ್ಷವಾಗಿ ರಾಹುಲ್ ವಾಗ್ದಾಳಿ ನಡೆಸಿದರು.

ತಮಿಳು ಭಾಷೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿದ ರಾಹುಲ್, ‘ದೆಹಲಿಯಲ್ಲಿ ನಾನು ತಮಿಳು ಜನರ ಪರ ಸೈನಿಕನಾಗಲು ಬಯಸುತ್ತೇನೆ. ತಮಿಳು ಸಂಸ್ಕೃತಿಯನ್ನು ಕಡೆಗಣಿಸಲು ಕೇಸರಿ ಪಕ್ಷಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

ರೋಡ್ ಷೋಗಳಲ್ಲಿ ಅಲ್ಲಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ‘ಬಿಜೆಪಿ ಒಂದು ಸಂಸ್ಕೃತಿ ಮತ್ತು ಒಂದೇ ಭಾಷೆಯನ್ನು ಜನರ ಮೇಲೆ ಹೇರಲು ಯತ್ನಿಸುತ್ತಿದೆ. ತಮಿಳು ಭಾಷೆಯನ್ನು ಎರಡನೇ ದರ್ಜೆಗೆ ತಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ‘ನಾನು ತಮಿಳು ಜನರ ಮನೋಭಾವ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಂಡಿದ್ದೇನೆ. ಅದನ್ನು ನಾನು ಗೌರವಿಸುತ್ತೇನೆ. ತಮಿಳರಿಗೆ ಅಗೌರವ ತೋರಿಸಲು ಪ್ರಧಾನಿ ಹಾಗೂ ಬಿಜೆಪಿಗೆ ಅವಕಾಶ ನೀಡುವುದಿಲ್ಲ. ದೇಶದ ಇತರರು ತಮಿಳುನಾಡಿನ ಇತಿಹಾಸ ಮತ್ತು ಭಾಷೆಯಿಂದ ಸಾಕಷ್ಟು ಕಲಿಯುವುದಿದೆ’ ಎಂದೂ ಅವರು ಹೇಳಿದರು. ರಾಹುಲ್ ಇಂಗ್ಲಿಷಿನಲ್ಲಿ ಮಾಡಿದ ಭಾಷಣವನ್ನು ತಮಿಳಿಗೆ ಅನುವಾದಿಸಿ ಹೇಳಲಾಯಿತು.

ಪ್ರಧಾನಿ ಅವರ ‘ಮನ್‌ ಕಿ ಬಾತ್’ ಕಾರ್ಯಕ್ರಮದ ಕುರಿತೂ ಟೀಕಿಸಿದ ರಾಹುಲ್, ‘ನಾನು ಅವರ ಮನ್ ಕಿ ಬಾತ್ ಕುರಿತು ಜನರಿಗೆ ಹೇಳಲು ಅಥವಾ ಸಲಹೆ ನೀಡಲು ತಮಿಳುನಾಡಿಗೆ ಬಂದಿಲ್ಲ. ಬದಲಿಗೆ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಬಂದಿದ್ದೇನೆ’ ಎಂದರು.

ಚುನಾವಣಾ ಪ್ರಚಾರ ಸಮಯದಲ್ಲೇ ರಾಹುಲ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಕೆ. ಕಾಮರಾಜ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಚುನಾವಣಾ ಪ್ರಚಾರದಲ್ಲಿ ಕೆಲವೆಡೆ ಕಾರಿನಿಂದ ಇಳಿದ ರಾಹುಲ್ ಜನರನ್ನು ಭೇಟಿ ಮಾಡಿ ಹಸ್ತಲಾಘವ ನೀಡಿದರು. ಕೆಲವರು ರಾಹುಲ್‌ಗೆ ಶಾಲುಗಳನ್ನು ನೀಡಿದರೆ, ಮತ್ತೆ ಕೆಲವರು ಗುಲಾಬಿ ಹೂವಿನ ದಳಗಳನ್ನು ಅವರ ಮೇಲೆ ಎಸೆದು ಸಂಭ್ರಮಿಸಿದರು. ವೃದ್ಧ ಮಹಿಳೆಯೊಬ್ಬರು ರಾಹುಲ್ ಅವರ ಹಣೆಯ ಮೇಲೆ ವಿಭೂತಿ ಹಚ್ಚಿದರು. ಅನೇಕರು ಸೆಲ್ಫಿಗಳನ್ನು ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT