ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಸದಸ್ಯತ್ವ ರದ್ದತಿ: ವಿಧಾನಸಭೆಗಳಲ್ಲಿ ‘ಕೈ’ ಸದಸ್ಯರ ಆಕ್ರೋಶ

ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದತಿಗೆ ಖಂಡನೆ
Last Updated 27 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನವದೆಹಲಿ/ಚೆನ್ನೈ /ಪಟ್ನಾ/ಪುದುಚೇರಿ (ಪಿಟಿಐ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ದೇಶದ ಹಲವೆಡೆ ಸೋಮವಾರವೂ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ಸದಸ್ಯರು ಕಪ್ಪು ದಿರಿಸು ಧರಿಸಿ ಧರಣಿ ನಡೆಸಿದರು. ಬಿಹಾರ, ಒಡಿಶಾ, ತಮಿಳುನಾಡು, ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಗುಜರಾತ್ ವಿಧಾನಸಭೆಯಲ್ಲಿ 16 ಕಾಂಗ್ರೆಸ್ ಶಾಸಕರನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್ ಮಿತ್ರಪಕ್ಷಗಳೂ ಬೆಂಬಲ ಸೂಚಿಸಿ ಪ್ರತಿಭಟನೆಗೆ ಇಳಿದಿದ್ದವು.

––––

* ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದ ಆರೋಪದಲ್ಲಿ, ಕಾಂಗ್ರೆಸ್‌ನ 17 ಸದಸ್ಯರ ಪೈಕಿ 16 ಸದಸ್ಯರನ್ನು ಬಜೆಟ್ ಅಧಿವೇಶನ ಮುಗಿಯುವವರೆಗೂ ಸದನದಿಂದ ಅಮಾನತು ಮಾಡಲಾಗಿದೆ

* ಒಡಿಶಾ ವಿಧಾನಸಭೆಯಲ್ಲೂ ಕಾಂಗ್ರೆಸ್ ಶಾಸಕರು ಕಪ್ಪು ದಿರಿಸು ಧರಿಸಿ ಪ್ರತಿಭಟನೆ ನಡೆಸಿದರು. ಕೆಲವು ಸದಸ್ಯರು ಸ್ಪೀಕರ್ ಆಸನದತ್ತ ನುಗ್ಗಲು ಯತ್ನಿಸಿದ್ದರಿಂದ ಕೋಲಾಹಲ ಉಂಟಾಯಿತು

* ಬಿಹಾರ ವಿಧಾನಸಭೆಯೂ ಕಾಂಗ್ರೆಸ್ ಶಾಸಕರ ತೀವ್ರ ಪ್ರತಿಭಟನೆಗೆ ಸೋಮವಾರ ಸಾಕ್ಷಿಯಾಯಿತು. ಕೈಗೆ ಕಪ್ಪುಪಟ್ಟಿ ಹಾಗೂ ತಲೆಗೆ ಕಪ್ಪುವಸ್ತ್ರ ಧರಿಸಿದ್ದ ಸದಸ್ಯರು ಧರಣಿ ನಡೆಸಿದರು. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಮಹಾಮೈತ್ರಿಕೂಟದ ಭಾಗವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವೂ ಪ್ರತಿಭಟನೆಗೆ ಬೆಂಬಲ ಸೂಚಿಸಿತು

* ಕೇರಳದ ಮುಸ್ಲಿಂ ಯೂತ್ ಲೀಗ್‌ನ ನೂರಾರು ಸದಸ್ಯರು ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿ ಕೋಯಿಕ್ಕೋಡ್‌ನಲ್ಲಿ ಪಂಜಿನ ಮೆರವಣಿಗೆ ನಡೆಸಿದರು

* ಪುದುಚೇರಿಯ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಡಿಎಂಕೆ ಸೇರಿದಂತೆ ಮೈತ್ರಿಕೂಟ ಸದಸ್ಯರು ಬೆಂಬಲ ಸೂಚಿಸಿದರು. ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು

* ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ದೇಶದ ಎಲ್ಲೆಡೆಯಿಂದ ಬಂದಿದ್ದ ಯುವ ಘಟಕದ ಕಾರ್ಯಕರ್ತರು ಸಂಸತ್‌ವರೆಗೆ ಮೆರವಣಿಗೆ ನಡೆಸಲು ಮುಂದಾದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ

* ಮಣಿಪುರದ ಕಾಂಗ್ರೆಸ್ ಘಟಕದ ಸದಸ್ಯರು ಇಂಫಾಲದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು

ಕಪ್ಪು ಸೀರೆಯಲ್ಲಿ ಬಿಜೆಪಿ ಶಾಸಕಿ!

ತಮಿಳುನಾಡು ಕಾಂಗ್ರೆಸ್ ಶಾಸಕರು ಸೋಮವಾರ ಕಪ್ಪು ದಿರಿಸು ಧರಿಸಿ ಸದನಕ್ಕೆ ಹಾಜರಾಗಿದ್ದರು. ಆದರೆ, ಇದರ ಅರಿವಿಲ್ಲದ ಬಿಜೆಪಿ ಶಾಸಕಿ ವಾಸಂತಿ ಶ್ರೀನಿವಾಸನ್ ಅವರು ಕಪ್ಪು ಸೀರೆ ಧರಿಸಿ ಸದನಕ್ಕೆ ಬಂದು ಅಚ್ಚರಿ ಮೂಡಿಸಿದರು. ಕಾಂಗ್ರೆಸ್ ಸದಸ್ಯರು ಕಪ್ಪು ದಿರಿಸಿನಲ್ಲಿ ಸದನಕ್ಕೆ ಬರುತ್ತಾರೆ ಎಂಬ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ವಾಸಂತಿ ಹೇಳಿದರು. ‘ನೀವು ಕಾಂಗ್ರೆಸ್ ಬೆಂಬಲಿಸುತ್ತೀರಾ’ ಎಂದು ವಾಸಂತಿ ಅವರನ್ನು ಸ್ಪೀಕರ್ ಪ್ರಶ್ನಿಸಿದರು. ‘1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಡಿಎಂಕೆ ಸದಸ್ಯರು ಎದುರಿಸಿದ ತೊಂದರೆಯ ವಿರುದ್ಧ ಪ್ರತಿಭಟನೆ ನಡೆಸಲು ನಾನು ಕಪ್ಪು ಸೀರೆ ಧರಿಸಿದ್ದೆ’ ಎಂದು ಅವರು ಸಮಜಾಯಿಷಿ ನೀಡಲು ಯತ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT