ಜಡಚೆರ್ಲಾ, ತೆಲಂಗಾಣ: ಇಲ್ಲಿನ ಮೆಹಬೂಬ್ ನಗರ ಜಿಲ್ಲೆಯಲ್ಲಿ ಭಾನುವಾರ ನಡೆದ ಭಾರತ್ ಜೋಡೊ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಾಲಾ ಮಕ್ಕಳೊಂದಿಗೆ ಓಡುವ ಮೂಲಕ ಗಮನ ಸೆಳೆದರು.
ಮಕ್ಕಳೊಂದಿಗೆ ಮಾತನಾಡುತ್ತಾ ಮುಂದಡಿ ಇಡುತ್ತಿದ್ದ ರಾಹುಲ್, ಇದ್ದಕ್ಕಿದ್ದಂತೆ ಅವರನ್ನೆಲ್ಲಾ ಹಿಂದಿಕ್ಕಿ ಓಡಲಾರಂಭಿಸಿದರು. ಇದನ್ನು ಕಂಡ ಕಾರ್ಯಕರ್ತರು ಹಾಗೂ ಅಂಗರಕ್ಷಕರು ಅವರನ್ನು ಹಿಂಬಾಲಿಸಿದರು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಕೂಡ ರಾಹುಲ್ ಹಿಂದೆ ಓಡಿದರು.
ಭಾನುವಾರ ಬೆಳಿಗ್ಗೆ ಕಾರ್ಯಕರ್ತರೊಂದಿಗೆ ಉತ್ಸಾಹದಿಂದಲೇ ಹೆಜ್ಜೆ ಹಾಕಿದ ರಾಹುಲ್, ಸುಮಾರು 22 ಕಿ.ಮೀ ದೂರ ಸಂಚರಿಸಿದರು. ಇಲ್ಲಿನ ಶಾದಬ್‌ನಗರದ ಸೋಲಿಪುರ್ ವೃತ್ತದಲ್ಲಿ ಆಯೋಜನೆಯಾಗಿದ್ದ ಸಭೆಯಲ್ಲಿ ಸ್ಥಳೀಯರ ಜೊತೆ ಚರ್ಚಿಸಿದರು.
ಜಡಚೆರ್ಲಾದಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಮಾತನಾಡಿದ ರಾಹುಲ್, ‘ಭಾರತವು ಅತ್ಯಧಿಕ ನಿರುದ್ಯೋಗಿಗಳನ್ನು ಹೊಂದಿರುವ ದೇಶವಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿಗಳೂ ನಮ್ಮ ದೇಶದಲ್ಲಿದ್ದಾರೆ’ ಎಂದರು.
‘ಹಿಂದಿನ 35 ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗ ಅತಿ ಹೆಚ್ಚು ನಿರುದ್ಯೋಗಿಗಳಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿಗಳೆನಿಸಿಕೊಂಡವರು ತಮಗೆ ಬೇಕಾದುದನ್ನೆಲ್ಲಾ ಮಾಡುತ್ತಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಪ್ರಧಾನಿ ಮೋದಿ ಅವರು ಶ್ರೀಮಂತರಿಗೆ ಬೆಂಬಲವಾಗಿ ನಿಂತಿದ್ದಾರೆ. ಇವು ರಾಜಕೀಯ ಪಕ್ಷಗಳಲ್ಲ ಉದ್ಯಮಗಳು. ಮೋದಿ ಸರ್ಕಾರವು ಯಾವುದೇ ಜನ ವಿರೋಧಿ ನೀತಿ ಜಾರಿಗೊಳಿಸಿದರೂ ಕೆಸಿಆರ್ ಅದನ್ನು ಬೆಂಬಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ನೇಕಾರರು ಪಾವತಿಸುತ್ತಿರುವ ಜಿಎಸ್‌ಟಿ ಮೊತ್ತವನ್ನು ಮರು ಪಾವತಿ ಮಾಡಲಾಗುತ್ತದೆ. ಬಜೆಟ್‌ನಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗುತ್ತದೆ’ ಎಂದು ಹೇಳಿದರು.
‘ಸಾಯಿಬಾಬಾ–ರಾಹುಲ್ ಅವರದ್ದು ಸಮಾನ ಚಿಂತನೆ’
‘ಶಿರಡಿ ಸಾಯಿಬಾಬಾ ಹಾಗೂ ರಾಹುಲ್ ಗಾಂಧಿ ಅವರು ಒಂದೇ ಬಗೆಯ ಚಿಂತನೆಯನ್ನು ಹೊಂದಿದ್ದಾರೆ. ಸಾಯಿಬಾಬಾ ಅವರಂತೆ ರಾಹುಲ್ ಕೂಡ ಏಕತೆಯನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದು ರಾಹುಲ್ ಅವರ ಬಾವ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಸಾಯಿಬಾಬಾ ದರ್ಶನಕ್ಕಾಗಿ ಭಾನುವಾರ ಶಿರಡಿಗೆ ಭೇಟಿ ನೀಡಿದ್ದ ಅವರು, ‘ಭಾರತ್ ಜೋಡೊ ಯಾತ್ರೆಯು ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡಲಿದೆ. ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿರುವುದು ಇದಕ್ಕೆ ಸಾಕ್ಷಿ. ರಾಹುಲ್ ಅವರು ಈ ದೇಶದ ಜನರ ಪಾಲಿನ ಹೊಸ ಭರವಸೆಯಾಗಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.