ಮಂಗಳವಾರ, ಡಿಸೆಂಬರ್ 7, 2021
27 °C

ವರದಕ್ಷಿಣೆಯ ₹75 ಲಕ್ಷವನ್ನು ಹಾಸ್ಟೆಲ್‌ ಕಟ್ಟಲು ಕೊಟ್ಟ ವಧು

ಪಿಟಿಐ Updated:

ಅಕ್ಷರ ಗಾತ್ರ : | |

ಬಾರ್ಮೇರ್ (ರಾಜಸ್ಥಾನ): ಇಲ್ಲಿನ ವಧುವೊಬ್ಬರು ತಮ್ಮ ಮದುವೆಯಲ್ಲಿ ವರದಕ್ಷಿಣೆ ನೀಡಲು ಎಂದು ತೆಗೆದಿರಿಸಿದ್ದ ₹75 ಲಕ್ಷವನ್ನು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ದೇಣಿಗೆ ನೀಡಿದ್ದಾರೆ ಎಂದು ದೈನಿಕ ಭಾಸ್ಕರ ಪತ್ರಿಕೆಯು ವರದಿ ಮಾಡಿದೆ. ಈ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಧುವಿನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬಾರ್ಮೇರ್ ಜಿಲ್ಲೆಯ ಉದ್ಯಮಿ ಕಿಶೋರ್ ಸಿಂಗ್ ಕನೋದ್ ಎಂಬುವವರು ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವಾರ್ ಅವರ ವಿವಾಹವನ್ನು ನೆರವೇರಿಸಿದ್ದರು. ಮದುವೆ ಸಂದರ್ಭದಲ್ಲಿ, ವರ ಪ್ರವೀಣ್ ಸಿಂಗ್‌ಗೆ ವರದಕ್ಷಿಣೆ ನೀಡಲು ಎಂದು ಕಿಶೋರ್‌ ಅವರು ₹75 ಲಕ್ಷವನ್ನು ತೆಗೆದಿರಿಸಿದ್ದರು. ಆದರೆ ಮದುವೆಯ ಮುನ್ನಾದಿನ ಅಂಜಲಿ, ‘ವರದಕ್ಷಿಣೆ ನೀಡಲು ತೆಗೆದಿರಿಸಿರುವ ಹಣವನ್ನು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೀಡಿ’ ಎಂದು ತಮ್ಮ ತಂದೆಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಕಿಶೋರ್ ಸಹ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮದುವೆಯ ದಿನ ಮಂಟಪದಲ್ಲಿಯೇ ಈ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದಾರೆ. ತಮ್ಮ ಮಗಳಿಗೆ ಖಾಲಿ ಚೆಕ್‌ ನೀಡಿ, ಎಷ್ಟು ದೇಣಿಗೆ ನೀಡಬೇಕೊ ಅದನ್ನು ಚೆಕ್‌ನಲ್ಲಿ ನಮೂದಿಸು ಎಂದು ಹೇಳಿದ್ದಾರೆ. ಅಂಜಲಿ ಆ ಚೆಕ್‌ನಲ್ಲಿ ₹75 ಲಕ್ಷ ನಮೂದಿಸಿದ್ದಾರೆ. ಆ ಚೆಕ್‌ ಅನ್ನು ತಾರಾತರ ಮಠದ ಮುಖ್ಯಸ್ಥರಿಗೆ ಮಂಟಪದಲ್ಲಿಯೇ ಹಸ್ತಾಂತರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಿಶೋರ್ ಅವರು ಈ ಮೊದಲೇ ₹1 ಕೋಟಿ ದೇಣಿಗೆ ನೀಡಿದ್ದರು. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹50–75 ಲಕ್ಷದ ಅಗತ್ಯವಿತ್ತು. ಕಿಶೋರ್ ಅವರು ಈಗ ಅದನ್ನೂ ಒದಗಿಸಿದ್ದಾರೆ’ ಎಂದು ತಾರಾತರ ಮಠವು ಮಾಹಿತಿ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು