ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಬಿಕ್ಕಟ್ಟು: ಸದ್ಯಕ್ಕೆ ಯಾವುದೇ ಕ್ರಮ ಇಲ್ಲ

ರಾಜಸ್ಥಾನ ಬಿಕ್ಕಟ್ಟು: ಮುಖಂಡರಿಂದ ವರಿಷ್ಠರಿಗೆ ಸಲಹೆ
Last Updated 2 ಅಕ್ಟೋಬರ್ 2022, 21:28 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದಲ್ಲಿ ಇತ್ತೀಚೆಗೆ ಉಂಟಾಗಿದ್ದ ಬಿಕ್ಕಟ್ಟಿನ ಕುರಿತು ಯಾವುದೇ ತೀರ್ಮಾನ ತೆಗೆದು ಕೊಳ್ಳುವ ಆಲೋಚನೆಯಲ್ಲಿ ಕಾಂಗ್ರೆಸ್ ಸದ್ಯಕ್ಕೆ ಇಲ್ಲ.ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿರುವ ಈ ವೇಳೆಯಲ್ಲಿ, ನಾಯಕತ್ವ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಹೆಜ್ಜೆ ಇಡದಿರು ವುದೇ ಒಳಿತು ಎಂಬುದಾಗಿ ಪಕ್ಷದ ಮುಖಂಡರು ವರಿಷ್ಠರಿಗೆ ಸಲಹೆ ನೀಡಿದ್ದಾರೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎ.ಕೆ. ಆ್ಯಂಟನಿ ಸೇರಿದಂತೆ ಹಲವು ಮುಖಂಡರ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಿದ್ದಾರೆ. ಈ ಸಮಯದಲ್ಲಿ ಗೆಹಲೋತ್ ವಿರುದ್ಧ ಕ್ರಮಕ್ಕೆ ಮುಂದಾದರೆ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಗೊಂದಲ ಸ್ವಲ್ಪ ತಣ್ಣಗಾಗುವವರೆಗೆ ಯಾವುದೇ ಕ್ರಮಕ್ಕೆ ಮುಂದಾಗದಿರು ವುದು ಒಳ್ಳೆಯದು ಎಂಬ ಸಲಹೆ ಬಂದಿದೆ ಎನ್ನಲಾಗಿದೆ.

ಗೆಹಲೋತ್ ಗುಂಪಿನ ಶಾಸಕರು ಸೆ.28ರಂದು ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದೇ ಪ್ರತ್ಯೇಕ ಸಭೆ ನಡೆಸಿದ ಘಟನೆಗಳಿಗೆ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದರು. ಸೋನಿಯಾ ಅವರು ಈ ಬಗ್ಗೆ ಒಂದೆರಡು ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿದ್ದರು. ರಾಜ್ಯಕ್ಕೆ ಮತ್ತೆ ವೀಕ್ಷಕರನ್ನು ಕಳುಹಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಈ ವಿಚಾರ ಅನಿಶ್ಚಿತವಾಗಿದೆ.

ಮುಖ್ಯಮಂತ್ರಿ ಹುದ್ದೆಯನ್ನು ಆದಷ್ಟು ಬೇಗ ತಮಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಸಚಿನ್ ಪೈಲಟ್ ಅವರು ಇದ್ದರೆ, ಪಕ್ಷದ ಮೇಲೆ ಇನ್ನೂ ತಮಗೆ ಬಿಗಿ ಹಿಡಿತವಿದೆ ಎಂಬುದನ್ನು ಗೆಹಲೋತ್ ಸಾಬೀತುಪಡಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸದೆಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳುವ ಉದ್ದೇಶದಲ್ಲಿದ್ದ ಗೆಹಲೋತ್ ಅವರನ್ನು 108ರ ಪೈಕಿ 92 ಶಾಸಕರು ಬೆಂಬಲಿಸಿದ್ದರು.ಗೆಹಲೋತ್ ಸ್ಥಾನಕ್ಕೆ ಪೈಲಟ್ ಅವರನ್ನು ನೇಮಿಸಲು ವರಿಷ್ಠರು ಸಿದ್ಧರಾಗಿದ್ದಾರೆ ಎಂದು ಅಂದಾಜಿಸಿದ್ದ ಗೆಹಲೋತ್ ನಿಷ್ಠರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು. ಬಿಕ್ಕಟ್ಟು ಅರಿತ ಗೆಹಲೋತ್, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದರು.

‘ಹೊಸ ಮುಖ್ಯಮಂತ್ರಿ ಕಾರಣಕ್ಕೆ ಬಿಕ್ಕಟ್ಟು ಸೃಷ್ಟಿ’

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ಆಯ್ಕೆ ವಿಚಾರದಲ್ಲಿ ಶಾಸಕರು ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದ್ದು ಏಕೆ ಎಂಬ ಆಯಾಮದಲ್ಲಿ ಯೋಚಿಸಬೇಕಿದೆ ಎಂದುಮುಖ್ಯಮಂತ್ರಿ ಅಶೋಕ್ ಗೆಹಲೋತ್ ಭಾನುವಾರ ಹೇಳಿದ್ದಾರೆ.ಸಚಿನ್ ಪೈಲಟ್ ಅವರ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ ಅವರು, ‘ಹೊಸ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ ಎಂಬ ಸಮಯದಲ್ಲಿ ಶೇ 80ರಿಂದ 90ರಷ್ಟು ಶಾಸಕರು ಒಗ್ಗಟ್ಟಾಗಿದ್ದರು. ಹೀಗಾಗಿ ರಾಜಸ್ಥಾನದಲ್ಲಿ ಬದಲಾವಣೆ ಆಗಲಿಲ್ಲ’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ಸಮಯದಲ್ಲಿ, ಬಹುತೇಕ ಶಾಸಕರು ಹೊಸ ಮುಖ್ಯಮಂತ್ರಿಯ ಕಡೆಗೆ ವಾಲುತ್ತಾರೆ. ಇದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಆದರೆ ರಾಜಸ್ಥಾನದಲ್ಲಿ ಈ ವಿಚಾರ ಬೇರೆಯೇ ಆಗಿತ್ತು. ಹೊಸ ಮುಖ್ಯಮಂತ್ರಿಯ ಹೆಸರಿನ ಕಾರಣಕ್ಕೇ ಶಾಸಕರು ಪ್ರತಿಭಟನೆ ನಡೆಸಿದ್ದರು’ ಎಂದ ಅವರು ಕೊನೆಯ ಉಸಿರಿರುವವರೆಗೂ ರಾಜಸ್ಥಾನದ ಜನರಿಂದ ದೂರ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT