ಸೋಮವಾರ, ಮಾರ್ಚ್ 27, 2023
31 °C

ಶ್ರದ್ಧಾ ಹತ್ಯೆ ಹೋಲುವ ಪ್ರಕರಣ; ದೊಡ್ಡಮ್ಮನನ್ನು ಕೊಂದು, ಶವ ಕತ್ತರಿಸಿ ಎಸೆದ!

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಇಲ್ಲಿಗೆ ಸಮೀಪದ ದೆಹಲಿ ಹೆದ್ದಾರಿಯ ವಿವಿಧೆಡೆ ಎಸೆದ ಘಟನೆ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸರೋಜ್‌ ಶರ್ಮಾ (65) ಮೃತ ಮಹಿಳೆ. ಅಂಜು ಶರ್ಮಾ ಅಲಿಯಾಸ್‌ ಅಚಿಂತ್ಯ ಗೋವಿಂದ ದಾಸ್‌ (33) ಬಂಧಿತ ಆರೋಪಿ. 

ಕೊಲೆ, ನಂತರ ನಾಪತ್ತೆ ದೂರು ದಾಖಲು: ಅಂಜು ಶರ್ಮಾ, ತಂದೆ ಹಾಗೂ ತಂದೆಯ ಅಣ್ಣನ ಹೆಂಡತಿ ಸರೋಜ್‌ ಶರ್ಮಾ ಅವರೊಂದಿಗೆ ವಾಸಿಸುತ್ತಿದ್ದ. ಡಿ. 11ರಂದು ತಂದೆ ಇಂದೋರ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಂಜು ಶರ್ಮಾ ದೆಹಲಿಗೆ ಹೋಗಬೇಕೆಂದು ಬಯಸಿದ್ದ. ಇದಕ್ಕೆ ದೊಡ್ಡಮ್ಮ ನಿರಾಕರಿಸಿದ್ದರು. ಈ ವಿಷಯವಾಗಿ ಆರಂಭವಾದ ವಾಗ್ವಾದ ತಾರಕಕ್ಕೇರಿ ಅಂಜು ಶರ್ಮಾ ಸುತ್ತಿಗೆಯಿಂದ ದೊಡ್ಡಮ್ಮನ ತಲೆಗೆ ಹೊಡೆದಿದ್ದ. ಮೃತಳನ್ನು ಸ್ನಾನದ ಗೃಹಕ್ಕೆ ಎಳೆದೊಯ್ದು ಮಾರ್ಬಲ್ ಕತ್ತರಿಸುವ ಯಂತ್ರ ಬಳಸಿ,  ಎಂಟರಿಂದ ಹತ್ತು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಸೂಟ್‌ಕೇಸ್‌ನಲ್ಲಿ ಅವುಗಳನ್ನು ತುಂಬಿ ಹೆದ್ದಾರಿಯ ವಿವಿಧೆಡೆ ಎಸೆದಿದ್ದ. ನಂತರ ದೊಡ್ಡಮ್ಮ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಂಬಂಧಿಕರೊಂದಿಗೆ ಸೇರಿ ಹುಡುಕಾಟ ಸಹ ಆರಂಭಿಸಿದ್ದ.

ಈತನ ದಾರಿ ತಪ್ಪಿಸುವ ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು ತನಿಖೆ ಕೈಗೊಂಡಾಗ, ಸೂಟ್‌ಕೇಸ್‌ ಹಿಡಿದು ಅಂಜು ಶರ್ಮಾ ಮನೆಯಿಂದ ತೆರಳುವ ಸಿ.ಸಿ.ಟಿ.ವಿ ದೃಶ್ಯ ಪತ್ತೆಯಾಗಿತ್ತು. ಅಲ್ಲದೆ ಶರ್ಮಾ, ಮನೆಯಲ್ಲಿ ರಕ್ತದ ಕಲೆಗಳನ್ನು ಅಳಿಸುತ್ತಿರುವುದನ್ನು ಸಂಬಂಧಿಕರೊಬ್ಬರು ನೋಡಿದ್ದರು. ಇವುಗಳ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಅಂಜು ಶರ್ಮಾನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ... ಜಾರ್ಖಂಡ್: ಪತ್ನಿಯನ್ನು ಕೊಂದು ದೇಹವನ್ನು 12 ಭಾಗಗಳಾಗಿ ಕತ್ತರಿಸಿದ ಪತಿ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು