ಸೋಮವಾರ, ಆಗಸ್ಟ್ 8, 2022
22 °C

ಉದಯಪುರ ಟೈಲರ್ ಹತ್ಯೆ ಆರೋಪಿಗಳಿಗೆ ವಿದೇಶಿ ನಂಟು: ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೈಪುರ: ಉದಯಪುರದಲ್ಲಿ ನಡೆದಿರುವ ಟೈಲರ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ವಿದೇಶಿ ನಂಟಿರುವುದು (ಉಗ್ರ ಸಂಘಟನೆ?) ದೃಢಪಟ್ಟಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತಿಳಿಸಿದ್ದಾರೆ. 

ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು.

ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗೆಹಲೋತ್, ‘ಕನ್ಹಯ್ಯ ಲಾಲ್‌ ಹತ್ಯೆಯ ಹಿಂದೆ ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶವಿರುವುದು ಖಚಿತವಾಗಿದೆ. ಹಂತಕರು ವಿದೇಶಿ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಶಾಂತಿ ಕಾಪಾಡಲು ಮನವಿ ಮಾಡಿರುವ ಗೆಹಲೋತ್, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹತ್ಯೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಉದಯಪುರದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಹಲವೆಡೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. 

ಎನ್‌ಐಎ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ
ಟೈಲರ್ ಶಿರಚ್ಛೇದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಚಾರಣೆ ನಡೆಸಲಿದೆ. ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎನ್‌ಐಎಗೆ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆ ಮತ್ತು ಅಂತರರಾಷ್ಟ್ರೀಯ ಸಂಬಂಧದ ಕುರಿತಂತೆ ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

ಬಿಗಿ ಭದ್ರತೆ: ಹಲವೆಡೆ ಕರ್ಫ್ಯೂ ಜಾರಿ
ಟೈಲರ್‌ ಹತ್ಯೆ ಹಿನ್ನೆಲೆಯಲ್ಲಿ ಉದಯಪುರದ ಏಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯಿಂದಲ್ಲೇ ಮುಂದಿನ ಆದೇಶವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜತೆಗೆ, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

‘ರಾಜ್ಯಾದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಐಜಿಪಿ ಮತ್ತು ಎಸ್‌ಪಿಗಳಿಗೆ ಸೂಚನೆ ನೀಡಲಾಗಿದ್ದು, ಮುನ್ನೆಚ್ಚರಿಕೆಯಾಗಿ ಗಸ್ತು ಪಡೆ ಹೆಚ್ಚಿಸಬೇಕು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಹವಾ ಸಿಂಗ್ ಹೇಳಿದ್ದಾರೆ. 

ಉದಯಪುರ ಹತ್ಯೆ ಪ್ರಕರಣ: ಹಿಂಸೆ, ಉಗ್ರವಾದವನ್ನು ಒಪ್ಪಲಾಗದು ಎಂದ ಮಮತಾ ಬ್ಯಾನರ್ಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು