ಉದಯಪುರ: ಜೀವಬೆದರಿಕೆಯ ಕುರಿತು ಜೂನ್ 15ರಂದೇ ಲಿಖಿತ ದೂರು ನೀಡಿದ್ದ ಟೈಲರ್

ಜೈಪುರ: ಉದಯಪುರದಲ್ಲಿ ಮಂಗಳವಾರ(ಜೂನ್ 29) ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್ ಅವರು ತಮಗೆ ಜೀವ ಬೆದರಿಕೆ ಇರುವುದಾಗಿ ಜೂನ್ 15ರಂದೇ ಲಿಖಿತ ದೂರು ನೀಡಿದ್ದರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ 11 ರಂದು, ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಕುರಿತು ಕನ್ಹಯ್ಯ ಲಾಲ್ ವಿರುದ್ಧ ನೆರೆಮನೆಯ ನಾಜಿಮ್ ಪ್ರಕರಣ ದಾಖಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಕನ್ಹಯ್ಯ ಲಾಲ್ ಅವರನ್ನು ಬಂಧಿಸಲಾಗಿತ್ತು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಕನ್ಹಯ್ಯ ಲಾಲ್ ಅವರು ಜೂನ್ 15 ರಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ನಾಜಿಮ್ ಮತ್ತು ಇತರರಿಂದ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡಬೇಕೆಂದು ಪೋಲಿಸರಲ್ಲಿ ಕನ್ಹಯ್ಯ ಲಾಲ್ ಕೇಳಿಕೊಂಡಿದ್ದರು.
‘ತಮ್ಮ ಸಮುದಾಯದ ಸಾಮೂಹಿಕ ಮಾಧ್ಯಮ ಗ್ರೂಪ್‌ಗಳಲ್ಲಿ ನನ್ನ ಫೋಟೋವನ್ನು ಆರೋಪಿಗಳು ಹಂಚಿಕೊಂಡಿದ್ದಾರೆ. ನನ್ನನ್ನು ಎಲ್ಲಾದರೂ ಕಂಡರೆ ಅಥವಾ ಅಂಗಡಿ ತೆರೆದರೆ ಕೊಲ್ಲಬೇಕು ಎಂಬ ಸಂದೇಶಗಳನ್ನು ಹರಿಬಿಟ್ಟಿದ್ದಾರೆ’ ಎಂದು ಕನ್ಹಯ್ಯ ಲಾಲ್ ದೂರಿದ್ದರು.
‘ನಾಜಿಮ್ ಮತ್ತು ಇತರ ಐವರು ನನ್ನ ಅಂಗಡಿಯ ಸುತ್ತ ಸಂಶಯಾಸ್ಪದವಾಗಿ ಓಡಾಟ ನಡೆಸುತ್ತಿದ್ದಾರೆ. ನನಗೆ ಅಂಗಡಿ ತೆರೆಯಲು ಅವಕಾಶ ನೀಡುತ್ತಿಲ್ಲ. ಅವರು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.
‘ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ಮಗ ಅಚಾತುರ್ಯದಿಂದ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದಾನೆ. ಈ ಬಗ್ಗೆ ನನಗೆ ಗೊತ್ತಿರಲಿಲ್ಲ. ತನಗೆ ಫೋನ್ ಬಳಸುವುದೂ ತಿಳಿದಿಲ್ಲ’ ಎಂದೂ ಕನ್ಹಯ್ಯ ದೂರಿನಲ್ಲಿ ಬರೆದಿದ್ದರು. ಆದರೆ, ಪೊಲೀಸರು ನಾಜಿಮ್ ಮತ್ತು ಕನ್ಹಯ್ಯ ನಡುವೆ ಮಧ್ಯಸ್ಥಿಕೆ ವಹಿಸಿ ವಿಚಾರವನ್ನು ಇತ್ಯರ್ಥಗೊಳಿಸಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ (ಮಂಗಳವಾರ) ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಲಾಗಿತ್ತು.
ಇವನ್ನೂ ಓದಿ:
ರಾಜಸ್ಥಾನ: ಭೀಕರ ಹತ್ಯೆ ಬಳಿಕ ಭುಗಿಲೆದ್ದ ಪ್ರತಿಭಟನೆ, ಇಂಟರ್ನೆಟ್ ಸೇವೆ ಸ್ಥಗಿತ
ರಾಜಸ್ಥಾನ: ನೂಪುರ್ ಬೆಂಬಲಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಹತ್ಯೆ, ಇಬ್ಬರ ಬಂಧನ
ರಾಜಸ್ಥಾನ: ಉದಯಪುರ ಹತ್ಯೆಗೆ ಕಾಂಗ್ರೆಸ್ ನಾಯಕ ರಾಹುಲ್, ಪ್ರಿಯಾಂಕಾ ತೀವ್ರ ಖಂಡನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.