ಸೋಮವಾರ, ಡಿಸೆಂಬರ್ 5, 2022
22 °C

ರಾಜೀವ್‌ ಗಾಂಧಿ ಹತ್ಯೆ ಕೇಸ್: ಕೈದಿಗಳ ಅವಧಿಪೂರ್ವ ಬಿಡುಗಡೆ– ಸುಪ್ರೀಂಕೋರ್ಟ್ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಾದ ನಳಿನಿ ಶ್ರೀಹರನ್ ಮತ್ತು ಇತರ ಐವರ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಸಂವಿಧಾನದ 142ನೇ ವಿಧಿಯು ಕೊಡಮಾಡುವ ವಿಶೇಷ ಅಧಿಕಾರವನ್ನು ಬಳಸಿ ಸುಪ್ರೀಂ ಕೋರ್ಟ್‌ ಈ ನಿರ್ಧಾರ ತೆಗೆದುಕೊಂಡಿದೆ. ನಳಿನಿ ಸೇರಿ, ಜೀವಾವಧಿ ಶಿಕ್ಷೆಯಲ್ಲಿದ್ದ ರವಿಚಂದ್ರನ್, ಶಾಂತನ್, ಮುರುಗನ್, ರಾಬರ್ಟ್‌ ಪಯಾಸ್‌ ಮತ್ತು ಜಯಕುಮಾರ್‌ ಅವರಿಗೆ ಬಿಡುಗಡೆಯ ಅವಕಾಶ ದೊರೆತಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶದ ವಿರುದ್ಧ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವುದರ ಪರವಾಗಿದ್ದ ರಾಜೀವ್ ಗಾಂಧಿ ಪತ್ನಿ ಮತ್ತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಲುವಿನಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ.

ರಾಜೀವ್ ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬೇಕು ಎಂದು 2018ರಲ್ಲಿ ತಮಿಳುನಾಡು ಸರ್ಕಾರವು ಶಿಫಾರಸು ಮಾಡಿತ್ತು. ಆದರೆ, ಶಿಫಾರಸನ್ನು ರಾಜ್ಯಪಾಲರು ಕೇಂದ್ರ ಸರ್ಕಾರದ ಪರಾಮರ್ಶೆಗೆ ಕಳುಹಿಸಿದ್ದರು. ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ರಾಜೀವ್ ಹತ್ಯೆಯ ಸಂಚುಕೋರರಲ್ಲಿ ಒಬ್ಬರಾದ ಎ.ಜಿ.ಪೇರರಿವಾಳನ್ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 

ಪೇರರಿವಾಳನ್‌ ಅವರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಇದೇ ಮೇನಲ್ಲಿ ಆದೇಶಿಸಿತ್ತು. ಆನಂತರ ತಮ್ಮನ್ನೂ ಅವಧಿಪೂರ್ವವಾಗಿ ಬಿಡುಗಡೆ ಮಾಡಬೇಕು ಎಂದು ಉಳಿದವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಭಾರತೀಯ ದಂಡ ಸಂಹಿತೆ 302ನೇ ಸೆಕ್ಷನ್‌ ಅಡಿಯಲ್ಲಿ ಶಿಕ್ಷೆಗೆ ಗುರಿಯಾದವರ ಕ್ಷಮಾಪಣೆಗೆ ಸಂಬಂಧಿಸಿ ರಾಜ್ಯ ಸಚಿವ ಸಂಪುಟದ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿರಬೇಕು’ ಎಂದು ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು