ಶನಿವಾರ, ಜುಲೈ 24, 2021
28 °C

ಮಹಾರಾಷ್ಟ್ರದಲ್ಲಿ ಶರದ್‌ ಪಾವರ್‌ ಬಿಜೆಪಿ ಜೊತೆ ಸರ್ಕಾರ ರಚಿಸಬೇಕು: ಅಠಾವಳೆ

ಎಎನ್ಐ Updated:

ಅಕ್ಷರ ಗಾತ್ರ : | |

Photo/ BH Shivakumar

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ(ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬೆನ್ನಲ್ಲೇ ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಮಹಾರಾಷ್ಟ್ರದಲ್ಲಿ ಎನ್‌ಡಿಎ ಕೂಟಕ್ಕೆ ಸೇರ್ಪಡೆಗೊಳ್ಳುವಂತೆ ಎನ್‌ಸಿಪಿಗೆ ಆಹ್ವಾನ ನೀಡಿದ್ದಾರೆ.

ಎನ್‌ಸಿಪಿ ಮಹಾ ವಿಕಾಸ ಅಘಾಡಿ(ಎಂವಿಎ) ಮೈತ್ರಿ ಕೂಟದಿಂದ ಹೊರಬರುವಂತೆ ಆಗ್ರಹಿಸಿರುವ ರಾಮದಾಸ ಅಠಾವಳೆ, ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಂತೆ ಮನವಿ ಮಾಡಿದ್ದಾರೆ.

'ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಸರ್ಕಾರ ರಚನೆಯಾಗಲಿದೆ ಎಂದು ಭಾವಿಸಿದ್ದೇನೆ' ಎಂದು ಅಠಾವಳೆ 'ಎಎನ್ಐ'ಗೆ ಹೇಳಿದ್ದಾರೆ.

ಎನ್‌ಸಿಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಂತ್ರಿ ನವಾಬ್‌ ಮಲಿಕ್‌, ಎರಡೂ ಪಕ್ಷಗಳು ಯಾವತ್ತಿಗೂ ಜೊತೆಯಾಗಲು ಸಾಧ್ಯವಿಲ್ಲ. ಪಕ್ಷಗಳ ಸಿದ್ಧಾಂತ ಮತ್ತು ರಾಜಕೀಯ ನಡೆ ಬೇರೆ ಬೇರೆಯಾಗಿರುವುದರಿಂದ ಮೈತ್ರಿ ಸಾಧ್ಯವಿಲ್ಲ ಎಂಬ ಸ್ಪಷ್ಟನೆಗೆ ಅಠಾವಳೆ ಪ್ರತಿಕ್ರಿಯಿಸಿದ್ದಾರೆ. 'ಶಿವಸೇನಾ, ಕಾಂಗ್ರೆಸ್‌ ಮತ್ತು ಬಿಜೆಪಿ ನದಿಯ ವಿರುದ್ಧ ತೀರದಲ್ಲಿವೆ. ಆದರೆ ಅವುಗಳು ಜೊತೆಯಾಗಿವೆ. ಹಾಗಿರುವಾಗ ಬಿಜೆಪಿ ಮತ್ತು ಎನ್‌ಸಿಪಿ ಒಂದುಗೂಡಲು ಏಕೆ ಸಾಧ್ಯವಿಲ್ಲ? ಅಂಬೇಡ್ಕರ್‌ ವಿರುದ್ಧ ದಿಕ್ಕುಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು' ಎಂದು ಅಠಾವಳೆ ತಿಳಿಸಿದ್ದಾರೆ.

'ಶರದ್‌ ಪವಾರ್‌ ಅವರಿಗೆ ತಮ್ಮ ನಿಲುವನ್ನು ಬದಲಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಶಿವಸೇನಾಗೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯಬೇಕು. ಕಾಂಗ್ರೆಸ್‌ ನಿರಂತರವಾಗಿ ಎನ್‌ಸಿಪಿಗೆ ಎಚ್ಚರಿಕೆ ನೀಡುತ್ತಿದೆ. ಕಾಂಗ್ರೆಸ್‌ನ ನಾನಾಭಾವೂ ಪಟೋಲೆ ಅವರು ನಿರಂತರವಾಗಿ ಪವಾರ್‌ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಪವಾರ್‌ ಅವರು ಎನ್‌ಡಿಎ ಜೊತೆ ಕೈ ಜೋಡಿಸುವುದು ಉತ್ತಮ' ಎಂದು ಕೇಂದ್ರ ಸಚಿವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಎನ್‌ಸಿಪಿ ಮತ್ತು ಶರದ್‌ ಪವಾರ್‌ ಅವರಿಗಾಗಿ ಕಾಂಗ್ರೆಸ್‌ ಪಕ್ಷವು ಶಿವಸೇನಾವನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬೆಂಬಲಿಸಿತು. ಆದರೆ ಸರ್ಕಾರ ಸರಿಯಾದ ಮಾರ್ಗದಲ್ಲಿ ಸಾಗಲಿಲ್ಲ ಎಂದು ಅಠಾವಳೆ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು