ಸೋಮವಾರ, ಆಗಸ್ಟ್ 8, 2022
22 °C
ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಸ್ಪಷ್ಟನೆ

ಪ್ರಾದೇಶಿಕ ಭಾಷೆಗಳಿಗಿಲ್ಲ ‘ಅಧಿಕೃತ ಭಾಷೆ’ ಗೌರವ: ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಾದೇಶಿಕ ಭಾಷೆಗಳಿಗೆ ‘ಅಧಿಕೃತ ಭಾಷೆ’ಯ ಸ್ಥಾನಮಾನ ನೀಡುವ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

ಸದ್ಯ ಹಿಂದಿ ಮತ್ತು ಇಂಗ್ಲಿಷ್‌ ಸರ್ಕಾರದ ಅಧಿಕೃತ ಭಾಷೆಗಳಾಗಿದ್ದು, ಆ ಪಟ್ಟಿಗೆ ಪ್ರಾದೇಶಿಕ ಭಾಷೆಗಳನ್ನು ಸೇರಿಸುವ ಆಲೋಚನೆ ಇಲ್ಲ. ಅದಕ್ಕಾಗಿ ‘ಅಧಿಕೃತ ಭಾಷಾ ಕಾಯ್ದೆ’ಗೆ ತಿದ್ದುಪಡಿ ತರುವ ಪ್ರಸ್ತಾವವೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್‌ ಹೊರತಾಗಿ, ಸಂವಿಧಾನ ಗುರುತಿಸಿದ ಬೇರೆ ಯಾವುದಾದರೂ ಅನುಸೂಚಿತ ಪ್ರಾದೇಶಿಕ ಭಾಷೆಗಳನ್ನು ಅಧಿಕೃತ ಭಾಷೆ ಎಂದು ಗುರುತಿಸುವ ಪ್ರಸ್ತಾವ ಸರ್ಕಾರದ ಮುಂದಿದೆಯಾ ಎಂದು ತಮಿಳುನಾಡಿನ ಎಂಡಿಎಂಕೆ ಸಂಸದ ವೈಕೊ ಪ್ರಶ್ನಿಸಿದ್ದರು.

ಕೇಂದ್ರ ಸರ್ಕಾರದ ಹಿಂದಿ ಮತ್ತು ಇಂಗ್ಲಿಷ್‌ ಆದೇಶ, ಸುತ್ತೋಲೆಗಳನ್ನು ಹಿಂದಿಯೇತರ ಪ್ರದೇಶಗಳ ಜನರು, ಅದರಲ್ಲೂ ದಕ್ಷಿಣ ಭಾರತೀಯರು ಮತ್ತು ಈಶಾನ್ಯ ರಾಜ್ಯಗಳ ಜನರು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕೇಳಿದ್ದರು.

ಎಲ್ಲ ರಾಜ್ಯ ಸರ್ಕಾರಗಳ ಜತೆ ಚರ್ಚಿಸಿಯೇ 1968ರಲ್ಲಿ ಅಧಿಕೃತ ಆಡಳಿತ ಭಾಷೆಗಳ ನಿರ್ಣಯ ಅಂಗೀಕರಿಸಲಾಗಿದೆ. ಆ ನಿರ್ಣಯದಂತೆ ಮೂರು ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ ಬಿಟ್ಟು ಮೂರನೇ ಪ್ರಾದೇಶಿಕ ಭಾಷೆಗೆ ಅಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಹಿಂದಿಯೇತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಕಚೇರಿಗಳು ಸೂಚನಾ ಫಲಕಗಳಲ್ಲಿ ಅಂಟಿಸುವ ಸುತ್ತೋಲೆ ಮತ್ತು ಆದೇಶಗಳು ಕ್ರಮವಾಗಿ ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರಬೇಕು ಎಂಬ ನಿಯಮ ಪಾಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

’ಕನ್ನಡಿಗರು ದ್ವಿತೀಯ ದರ್ಜೆ ನಾಗರಿಕರೇ‘

 

ಬೆಂಗಳೂರು: ‘ಕನ್ನಡಕ್ಕೆ ಹಿಂದಿಯಂತೆಯೇ ಸ್ಥಾನಮಾನ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮತ್ತೆ ಪುನರುಚ್ಚರಿಸಿದೆ. ಹಾಗಾಗಿ, ಕನ್ನಡಿಗರು ಎರಡನೇ ದರ್ಜೆ ನಾಗರಿಕರಾಗಿ ಬದುಕುವುದು ಮುಂದುವರಿಯಲಿದೆ’ ಎಂದು ಕನ್ನಡ ಹೋರಾಟಗಾರ ಅರುಣ್‌ ಜಾವಗಲ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್‌ ಜಿ. ಎಂಬುವರು, ‘ಇದರ ವಿರುದ್ಧ ಕನ್ನಡಿಗರು ಗಟ್ಟಿ ಧ್ವನಿ ಮೊಳಗಿಸಬೇಕು. ಕನ್ನಡಿಗರು ಒಗ್ಗಟ್ಟಿನ ಶಕ್ತಿ, ಭಾಷಾಭಿಮಾನ ಪ್ರದರ್ಶಿಸಬೇಕು. ಇದು ಅನಿವಾರ್ಯ ಕೂಡ’ ಎಂದಿದ್ದಾರೆ. 

‘ಮೊದಲು ಕನ್ನಡಿಗ ನಂತರವೂ ಕನ್ನಡಿಗ‘ ಟ್ವಿಟರ್‌ ಖಾತೆಯಲ್ಲಿ, ‘ಅವರು ಕೇಳಿರುವ ಪ್ರಶ್ನೆ ಹಿಂದಿ ಗೊತ್ತಿಲ್ಲದವರು ಕೇಂದ್ರದ ನೀತಿ, ನಿಯಮಗಳು ಹಾಗೂ ಯೋಜನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಅಂತ. ಇವರು ಕೊಟ್ಟಿರುವ ಉತ್ತರ ನಾಮಫಲಕ, ಸೂಚನಾ ಫಲಕ ರಾಜ್ಯ ಭಾಷೆಗಳಲ್ಲೂ ಇರುತ್ತದೆ ಅಂತ. ಎಲ್ಲ ವಿವರಗಳನ್ನು ನಾಮಫಲಕ, ಸೂಚನಾ ಫಲಕದಲ್ಲಿ ಬರೆಯುತ್ತಾರೆಯೇ? ಬರೆದರೂ ಎಲ್ಲರೂ ಅಲ್ಲಿಗೇ ಹೋಗಿ ನೋಡೋಕಾಗುತ್ತಾ?‘ ಎಂದು ಪ್ರಶ್ನೆ ಮಾಡಲಾಗಿದೆ. ‘ಎಲ್ಲಿದ್ದಾರೆ ನಮ್ಮ ಭಕ್ತರು’ ಎಂದು ಕಾರ್ತಿಕ್‌ ಗೌಡ ಪ್ರಶ್ನಿಸಿದ್ದಾರೆ.

ಮಂಗಳವಾರದಿಂದ ಈ ವಿಷಯದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಟೀಕೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು