ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ನೇಮಕದಲ್ಲಿ ಪಾಲಿಸದ ಕಾಲಮಿತಿ: ಸಂಸದೀಯ ಸಮಿತಿ ಆಕ್ಷೇಪ

ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿ ವರದಿ ಸಲ್ಲಿಕೆ
Last Updated 11 ಡಿಸೆಂಬರ್ 2022, 12:45 IST
ಅಕ್ಷರ ಗಾತ್ರ

ನವದೆಹಲಿ:ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ವ್ಯವಸ್ಥೆ ಮೂಲಕ ಕಾಲಮಿತಿಯೊಳಗೆ ಭರ್ತಿ ಮಾಡಲು ಕಾರ್ಯಾಂಗ ಮತ್ತು ನ್ಯಾಯಾಂಗವುಬದ್ಧತೆ ಹೊಂದಿಲ್ಲದಿರುವುದು ವಿಷಾದದ ಸಂಗತಿ ಎಂದು ಸಂಸದೀಯ ಸಮಿತಿ ಹೇಳಿದೆ.

ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಮುಸುಕಿನ ಗುದ್ದಾಟ ಬಿಟ್ಟು,ಉನ್ನತ ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆಗಳ ದೀರ್ಘಕಾಲಿಕ ಸಮಸ್ಯೆ ಪರಿಹರಿಸಲು ನ್ಯಾಯಾಂಗ ಮತ್ತು ಕಾರ್ಯಾಂಗವು ವಿಶಾಲ ದೃಷ್ಟಿಯಲ್ಲಿ ಹೊಸ ರೀತಿಯಾಗಿ ಯೋಚಿಸಬೇಕು ಎಂದು ಸಂಸದೀಯ ಸಮಿತಿ ಹೇಳಿದೆ.

ಕಾನೂನು ಮತ್ತು ಸಿಬ್ಬಂದಿ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯು ಗುರುವಾರ ಸಂಸತ್‌ನಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ, ‌ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಹಾಗೂ ಕೇಂದ್ರ ಕಾನೂನು ಸಚಿವಾಲಯದಲ್ಲಿನ ನ್ಯಾಯಾಂಗ ಇಲಾಖೆಯ ಅಭಿಪ್ರಾಯಗಳೊಂದಿಗೆ ನೇಮಕ ಮಾಡುವಾಗ ಕಾಲಮಿತಿಯನ್ನು ಅಳವಡಿಸಿಕೊಂಡಿಲ್ಲ. ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನದ ಜ್ಞಾಪಕ ಪತ್ರದಲ್ಲಿ (ಎಂಒಪಿ) ಕಾಲ ಮಿತಿಯ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಗಮನ ಸೆಳೆಯಲಾಗಿದೆ.

‘ವಿಷಾದದ ಸಂಗತಿ ಎಂದರೆ, ಆ ಕಾಲಮಿತಿಗೆ ನ್ಯಾಯಾಂಗ ಮತ್ತು ಶಾಸಕಾಂಗ ಎರಡೂ ಬದ್ಧವಾಗಿಲ್ಲ. ಇದು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.ಸರ್ಕಾರ ಮತ್ತು ನ್ಯಾಯಾಂಗವು ಹೈಕೋರ್ಟ್‌ಗಳಲ್ಲಿನ ಖಾಲಿ ಹುದ್ದೆಗಳ ಈ ದೀರ್ಘಕಾಲಿಕ ಸಮಸ್ಯೆಯನ್ನು ನಿವಾರಿಸಲು ಕೆಲವು ಹೊಸಬಗೆಯ ರೀತಿಯಲ್ಲಿ ಯೋಚಿಸಬೇಕು’ ಎಂದು ಸಮಿತಿ ಹೇಳಿದೆ.

ಸರ್ಕಾರದ ಮಾಹಿತಿಯ ಪ್ರಕಾರ, 2021ರಡಿಸೆಂಬರ್ 31ರವರೆಗೆ ತೆಲಂಗಾಣ, ಪಟ್ನಾ ಮತ್ತು ದೆಹಲಿಯ ಮೂರು ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳು ಶೇ 50ಕ್ಕಿಂತ ಹೆಚ್ಚಿದೆ. ಅಲ್ಲದೆ 10 ಹೈಕೋರ್ಟ್‌ಗಳಲ್ಲಿ ಶೇ 40ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ.

‘ಇವೆಲ್ಲವೂ ದೊಡ್ಡ ರಾಜ್ಯಗಳು. ಅಲ್ಲಿನ ಜನಸಂಖ್ಯೆಯ ಅನುಪಾತಕ್ಕೆ ನ್ಯಾಯಮೂರ್ತಿಗಳ ಸಂಖ್ಯೆ ಅತೀ ಕಡಿಮೆ ಇದೆ. ಖಾಲಿ ಹುದ್ದೆಗಳ ಭರ್ತಿಗೆ ತೀವ್ರ ಕಾಳಜಿ ವಹಿಸಬೇಕಾದ ವಿಷಯ’ ಎಂದು ಬಿಜೆಪಿಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿಯು ಹೇಳಿದೆ.

‘ಪರಿಷ್ಕೃತ ಎಂಒಪಿ ಅಂತಿಮಗೊಳಿಸಿ’:‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕದ ಕಾರ್ಯವಿಧಾನದ ಜ್ಞಾಪಕ ಪತ್ರ (ಎಂಒಪಿ) ಪರಿಷ್ಕರಣೆ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲು ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ವಿಫಲವಾಗಿರುವುದು, ಈ ಸಮಸ್ಯೆ ಸುಮಾರು ಏಳು ವರ್ಷಗಳಿಂದ ಹಾಗೆಯೇ ಉಳಿಸಿಕೊಂಡಿರುವುದು ಆಶ್ಚರ್ಯದ ಸಂಗತಿ. ಪರಿಷ್ಕೃತ ಎಂಒಪಿ ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಿದೆ. ಇದನ್ನುಕೇಂದ್ರ ಸರ್ಕಾರ ಮತ್ತು ನ್ಯಾಯಾಂಗವು ಅಂತಿಮಗೊಳಿಸುವುದನ್ನು ಸಮಿತಿ ನಿರೀಕ್ಷಿಸುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

330 ನ್ಯಾಯಮೂರ್ತಿಗಳ ಹುದ್ದೆ ಖಾಲಿ:ದೇಶದಲ್ಲಿ 25 ಹೈಕೋರ್ಟ್‌ಗಳಿವೆ. ಡಿಸೆಂಬರ್‌ 5ರವರೆಗಿನ ಮಾಹಿತಿ ಪ್ರಕಾರ, ಮಂಜೂರಾದ 1,108 ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ 778 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ಸಂಬಂಧಿಸಿ 20 ಕಡತಗಳನ್ನು ಮರುಪರಿಶೀಲಿಸುವಂತೆನವೆಂಬರ್ 25 ರಂದುಕೇಂದ್ರ ಸರ್ಕಾರವುಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಕೇಳಿಕೊಂಡಿತ್ತು. ನೇಮಕಾತಿಯಲ್ಲಿ ಮೀಸಲಾತಿ ಪಾಲಿಸುವಂತೆ ಬಲವಾದ ಪ್ರತಿಪಾದನೆ ಮಾಡಿತ್ತು.

20 ಹೆಸರುಗಳಲ್ಲಿ, 11 ಹೊಸ ಹೆಸರುಗಳು ಮತ್ತು ಒಂಬತ್ತು ಹೆಸರುಗಳು ಕೊಲಿಜಿಯಂ ಮತ್ತೊಮ್ಮೆ ಶಿಫಾರಸು ಮಾಡಿದವುಗಳಾಗಿದ್ದವು. ಕೊಲಿಜಿಯಂ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕೇಂದ್ರ ಸರ್ಕಾರ, ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳ ಪಟ್ಟಿ ಹಿಂದುರಿಗಿಸಿದೆ ಎಂದು ಮೂಲಗಳು ತಿಳಿಸಿವೆ.

‘ಸುಪ್ರೀಂ’ ನ್ಯಾಯಮೂರ್ತಿ ಹುದ್ದಗೇರಿದ ದೀಪಾಂಕರ್‌ ದತ್ತಾ
ನವದೆಹಲಿ (ಪಿಟಿಐ):
ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ (57) ಅವರು ಭಾನುವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯ ಹುದ್ದೆಗೇರಿದ್ದಾರೆ.

ದತ್ತಾ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಲಿದೆ. ಮುಖ್ಯ ನ್ಯಾಯಮೂರ್ತಿ ಹುದ್ದೆಯೂ ಸೇರಿ ಸುಪ್ರೀಂ ಕೋರ್ಟ್‌ನಲ್ಲಿ 34 ಮಂಜೂರಾತಿ ಹುದ್ದೆಗಳಿವೆ.

ನ್ಯಾಯಮೂರ್ತಿ ಯು.ಯು. ಲಲಿತ್‌ (ನಿವೃತ್ತಿ) ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂ ದತ್ತಾ ಅವರ ಹೆಸರನ್ನು ಕಳೆದ ಸೆಪ್ಟೆಂಬರ್‌ 26ರಂದು ಈ ಹುದ್ದೆಗೆ ಶಿಫಾರಸು ಮಾಡಿತ್ತು. ದತ್ತಾ ಅವರು 2020ರ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಿರುವುದನ್ನು ಕಾನೂನು ಸಚಿವ ಕಿರಣ್‌ ರಿಜಿಜು ಅವರು ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT