ನವದೆಹಲಿ: ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅವರು ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ.
‘ದೆಹಲಿಯಲ್ಲಿ ನಡೆದಿರುವ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತಾವೇ ಖುದ್ದಾಗಿ ಮಧ್ಯೆಪ್ರವೇಶಿಸಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಜತೆಗೆ ತಪ್ಪಿಸ್ಥರನ್ನು ಅದಷ್ಟು ಬೇಗ ಬಂಧಿಸಬೇಕು ಎಂದು ರೇಖಾ ಶರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ದೆಹಲಿಯ ಉತ್ತಮ್ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕಿ ಮೇಲೆ ಆಸಿಡ್ ಮಾದರಿಯ ರಾಸಾಯನಿಕ ದ್ರವ ಎರಚಿ ಪರಾರಿಯಾಗಿದ್ದಾರೆ.
‘ಸಂತ್ರಸ್ತ ಬಾಲಕಿಗೆ 17 ವರ್ಷ ವಯಸ್ಸು. ಆಕೆ ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ತನ್ನ ತಂಗಿಯ ಜೊತೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್ ಮಾದರಿಯ ರಾಸಾಯನಿಕ ದ್ರವ ಎರಚಿದ್ದಾಗಿ ಗೊತ್ತಾಗಿದೆ. ಮೋಹನ್ ಗಾರ್ಡನ್ ಠಾಣೆಯ ಅಧಿಕಾರಿಗಳಿಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಕುರಿತ ಮಾಹಿತಿ ಲಭಿಸಿತ್ತು’ ಎಂದು ದ್ವಾರಕಾ ವಿಭಾಗದ ಡಿಸಿಪಿ ಎಂ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ...ದೆಹಲಿ: ಬೈಕ್‌ನಲ್ಲಿ ಬಂದು ಬಾಲಕಿ ಮೇಲೆ ಆಸಿಡ್ ದಾಳಿ
‘ಆಸಿಡ್ ಮಾರಾಟ ಅವ್ಯಾಹತವಾಗಿದೆ: ನೀವೇನು ಮಾಡುತ್ತಿದ್ದೀರಿ?’
‘ಆಯೋಗವು ಸಾಕಷ್ಟು ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಹಲವು ಶಿಫಾರಸುಗಳನ್ನು ಮಾಡಿದೆ. ಹೀಗಿದ್ದರೂ ಆಸಿಡ್ ಮಾರಾಟ ಅವ್ಯಾಹತವಾಗಿದೆ. ಯಾರು ಬೇಕಾದರೂ ಆಸಿಡ್ ಖರೀದಿಸಿ ಬಾಲಕಿಯರ ಮೇಲೆ ಎರಚಬಹುದಾಗಿದೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳದೆ ಸರ್ಕಾರಗಳು ನಿದ್ರೆಗೆ ಜಾರಿರುವುದಾದರೂ ಏಕೆ’ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಳಿವಾಲ್ ಪ್ರಶ್ನಿಸಿದ್ದಾರೆ.
ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಾಕಿರುವ ಅವರು,‘ಆಸಿಡ್ ಮಾರಾಟ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.