ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳಿಗೇ ಇರಲಿ ಹಿಂದೂ ದೇವಾಲಯಗಳ ಹಕ್ಕು; ಅದರ ಸಂಪತ್ತೂ ಹಿಂದೂಗಳಿಗೆ–ಭಾಗವತ್

Last Updated 15 ಅಕ್ಟೋಬರ್ 2021, 11:05 IST
ಅಕ್ಷರ ಗಾತ್ರ

ನಾಗ್ಪುರ: ದೇಶದಲ್ಲಿ ಕೆಲವು ದೇವಾಲಯಗಳ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಅಂತಹ ದೇವಾಲಯಗಳ ಕಾರ್ಯನಿರ್ವಹಣೆಯ ಹಕ್ಕುಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಹಾಗೂ ಅದರ ಸಂಪತ್ತು ಹಿಂದೂ ಸಮುದಾಯದ ಕಲ್ಯಾಣಕ್ಕೆ ಮಾತ್ರವೇ ಬಳಕೆಯಾಗಬೇಕು ಎಂದು ಹೇಳಿದರು.

ಇಲ್ಲಿನ ರೇಶಿಮ್‌ ಬಾಗ್‌ನಲ್ಲಿ ನಡೆದ ವಾರ್ಷಿಕ ವಿಜಯದಶಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ದೇವಾಲಯಗಳನ್ನು ರಾಜ್ಯ ಸರ್ಕಾರಗಳು ನಿಯಂತ್ರಿಸುತ್ತಿವೆ, ದೇಶದ ಉಳಿದ ಭಾಗಗಳಲ್ಲಿ ಕೆಲವು ದೇವಸ್ಥಾನಗಳನ್ನು ಸರ್ಕಾರ ಹಾಗೂ ಇನ್ನೂ ಕೆಲವು ಮಂದಿರಗಳನ್ನು ಭಕ್ತಾದಿಗಳು ನಿರ್ವಹಿಸುತ್ತಿದ್ದಾರೆ. ಸರ್ಕಾರ ನಿರ್ವಹಿಸುತ್ತಿರುವ ಮಾತಾ ವೈಷ್ಣೋ ದೇವಿ ದೇವಾಲಯದ ಉದಾಹರಣೆ ಕೊಟ್ಟ ಅವರು, ಅದನ್ನು ಬಹಳ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ ಎಂದರು.

'ಮಹಾರಾಷ್ಟ್ರದ ಬುಲಡಾಣಾ ಜಿಲ್ಲೆಯ ಶೆಗಾಂವ್‌ನಲ್ಲಿರುವ ಗಜಾನನ್ ಮಹಾರಾಜ್‌ ದೇವಾಲಯ, ದೆಹಲಿಯ ಝಂಡೆವಾಲಾ ಮಂದಿರವನ್ನು ಭಕ್ತಾದಿಗಳೇ ನಿರ್ವಹಿಸುತ್ತಿದ್ದು, ಅವು ಸಹ ಸಮರ್ಥವಾಗಿ ಕಾರ್ಯಾಚರಿಸುತ್ತಿವೆ. ಆದರೆ, ಎಲ್ಲಿ ಸಮರ್ಥ ನಿರ್ವಹಣೆ ಇಲ್ಲವೋ ಅಲ್ಲಿ ಲೂಟಿ ನಡೆಯುತ್ತಿದೆ' ಎಂದು ಭಾಗವತ್‌ ಹೇಳಿದರು.

ಕೆಲವು ದೇವಾಲಯಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದೇವಾಲಯಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ಥಿಗಳ ದುರ್ಬಳಕೆ ಕುರಿತು ಬಹಿರಂಗವಾಗುತ್ತಿದೆ ಎಂದ ಅವರು, 'ಹಿಂದೂ ದೇವಾಲಯಗಳ ಸಂಪತ್ತನ್ನು ಹಿಂದೂ ದೇವರುಗಳ ಬಗ್ಗೆ ನಂಬಿಕೆ ಇಲ್ಲದ, ಹಿಂದೂಯೇತರ ಜನರಿಗಾಗಿ ಬಳಸಲಾಗುತ್ತಿದೆ. ಹಿಂದೂಗಳಿಗೆ ಅದರ ಅಗತ್ಯವಿದ್ದರೂ, ಅವರಿಗಾಗಿ ಅದರ ಬಳಕೆಯಾಗುತ್ತಿಲ್ಲ' ಎಂದರು.

ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಆದೇಶವಿದ್ದು, 'ದೇವಾಲಯಕ್ಕೆ ದೇವರೇ ಒಡೆಯ, ಇನ್ನಾರೂ ಸಹ ಮಾಲೀಕನಾಗಲು ಆಗುವುದಿಲ್ಲ' ಎಂದು ಕೋರ್ಟ್ ಹೇಳಿದೆ. ಪುರೋಹಿತರು ನಿರ್ವಹಣೆ ಮಾಡುವವರು ಮಾತ್ರವೇ ಆಗಿರುತ್ತಾರೆ. ನಿರ್ವಹಣೆಯ ದೃಷ್ಟಿಯಿಂದಾಗಿ ಸರ್ಕಾರವು ದೇವಾಲಯದ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ, ಅದೂ ಸಹ ಕೆಲವು ಸಮಯದವರೆಗೂ ಮಾತ್ರ. ಅನಂತರ ಒಡೆತನವನ್ನು ಮರಳಿಸಬೇಕಾಗುತ್ತದೆ. ಹಾಗಾಗಿ, ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಹಾಗೇ ಹಿಂದೂ ಸಮಾಜವು ಈ ದೇವಾಲಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗೆಗೂ ನಿರ್ಧರಿಸಬೇಕಿದೆ ಎಂದು ಭಾಗವತ್‌ ಹೇಳಿದರು.

ಯಾವುದೇ ಜಾತಿ ಮತ್ತು ಪಂಥಕ್ಕೆ ಸೇರಿದ ವ್ಯಕ್ತಿಗೆ ತಾರತಮ್ಯವಿಲ್ಲದೆ ದೇವಾಲಯಗಳಿಗೆ ಪ್ರವೇಶ, ದೇವರ ದರ್ಶನಕ್ಕೆ ಅವಕಾಶ ಸಿಗಬೇಕು. ಅದು ಎಲ್ಲ ಕಡೆಯೂ ಸರಿಯಾಗಿ ಪಾಲನೆಯಾಗುತ್ತಿಲ್ಲ, ಅದನ್ನು ಸರಿಪಡಿಸಬೇಕಿದೆ. ಆಧ್ಯಾತ್ಮಿಕ ಗುರುಗಳು ಹಾಗೂ ವಿದ್ವಾಂಸರನ್ನು ಸಂಪರ್ಕಿಸದೆಯೇ ದೇವಾಲಯಗಳಿಗೆ ಸಂಬಂಧಿಸಿದಯೇ 'ಚಿತ್ರವಿಚಿತ್ರ ರೀತಿಯಲ್ಲಿ' ಧಾರ್ಮಿಕ ನಿಯಾಮಾವಳಿಗಳನ್ನು ರೂಪಿಸಲಾಗುತ್ತಿದೆ ಎಂದು ಭಾಗವತ್‌ ಅವರು ತಮ್ಮ ಲಿಖಿತ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

'ಭಕ್ತಾದಿಗಳು ಅಲ್ಲದವರಿಗೆ, ಧರ್ಮಕ್ಕೆ ಸೇರದವರಿಗೆ ಹಿಂದೂ ಧಾರ್ಮಿಕ ಸ್ಥಳಗಳ ನಿರ್ವಹಣೆಯ ಹೊಣೆಯನ್ನು ನೀಡುತ್ತಿರುವುದನ್ನು ತೆಗೆದು ಹಾಕಬೇಕಿದೆ. ಹಿಂದೂ ದೇವಾಲಯಗಳ ನಿರ್ವಹಣೆಯ ಹಕ್ಕನ್ನು ಹಿಂದೂ ಭಕ್ತಾದಿಗಳಿಗೆ ಹಸ್ತಾಂತರಿಸಬೇಕು ಹಾಗೂ ಹಿಂದೂ ದೇವಾಲಯಗಳ ಸಂಪತ್ತನ್ನು ದೇವರ ಪೂಜೆಗಳಿಗೆ ಮತ್ತು ಹಿಂದೂ ಸಮುದಾಯದ ಕಲ್ಯಾಣಕ್ಕೆ ಮಾತ್ರವೇ ಬಳಕೆ ಮಾಡಬೇಕಾದ ಅಗತ್ಯವಿದೆ' ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT