ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ವಾರ್ಷಿಕ ಸಮಾವೇಶಕ್ಕೆ ಚಾಲನೆ

Last Updated 13 ಮಾರ್ಚ್ 2023, 0:09 IST
ಅಕ್ಷರ ಗಾತ್ರ

ಸಮಾಲಖಾ (ಹರಿಯಾಣ): ಆರ್‌ಎಸ್‌ಎಸ್‌ನ ಮೂರು ದಿನಗಳ ವಾರ್ಷಿಕ ಸಮಾವೇಶ ಭಾನುವಾರ ಇಲ್ಲಿ ಆರಂಭವಾಯಿತು. ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರತ್ತ ಸಂಘಟನೆ ಒತ್ತು ನೀಡಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಹಾಗೂ ಅದರ ಅಂಗಸಂಸ್ಥೆಗಳು ಕೈಗೊಂಡಿರುವ ಕಾರ್ಯಗಳ ಪರಿಶೀಲನೆ ನಡೆಯಲಿದೆ. ಮುಂದಿನ ಒಂದು ವರ್ಷದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೂರು ದಿನಗಳ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.

ಮಹಿಳೆಯರ ಅಭ್ಯುದಯಕ್ಕಾಗಿ ಸಂಘದಲ್ಲಿ ‘ರಾಷ್ಟ್ರೀಯ ಸೇವಿಕಾ ಸಮಿತಿ’ ಎಂಬ ಪ್ರತ್ಯೇಕ ಘಟಕವಿದ್ದು, ಸಾಮಾಜಿಕ ಪರಿವರ್ತನೆಯ ಕೆಲಸಗಳ ಬಗ್ಗೆಯೂ ಇಲ್ಲಿ ಚರ್ಚೆಯಾಗಲಿದೆ. ಸ್ವಾವಲಂಬನೆ, ದೇಶದ 75ನೇ ಸ್ವಾತಂತ್ರ್ಯೋತ್ಸವ ಕುರಿತಂತೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.

ನಿತ್ಯ ಶಾಖೆಗಳ ಸಂಖ್ಯೆಯನ್ನು ವರ್ಷದಲ್ಲಿ ಒಂದು ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇಂತಹ ಶಾಖೆಗಳಲ್ಲಿ ಪಾಲ್ಗೊಳ್ಳುವವರ ಪೈಕಿ ಶೇ 60ರಷ್ಟು ವಿದ್ಯಾರ್ಥಿಗಳು ಇದ್ದಾರೆ. ಆರ್‌ಎಸ್‌ಎಸ್‌ ಸೇರ್ಪಡೆಗೆ 7.25 ಲಕ್ಷ ಯುವಕರು ಒಲವು ತೋರಿದ್ದಾರೆ ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಮನಮೋಹನ್ ವೈದ್ಯ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಿಧನರಾದ ನೂರಕ್ಕೂ ಹೆಚ್ಚು ಗಣ್ಯರಿಗೆ ಸಮಾವೇಶದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಸಮಾಜವಾದಿ ನಾಯಕ ಶರದ್ ಯಾದವ್, ಹಿರಿಯ ವಕೀಲ ಶಾಂತಿ ಭೂಷಣ್, ಬಿಜು ಜನತಾದಳದ ನಾಯಕ ನಬಕಿಶೋರ್ ದಾಸ್, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರಿಗೆ ಗೌರವ ಸಲ್ಲಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ನಿಧನರಾದ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳು, ಆರ್‌ಎಸ್‌ಎಸ್ ಪದಾಧಿಕಾಗಳು ಹಾಗೂ ಗಣ್ಯರ ಹೆಸರನ್ನು ಆರ್‌ಎಸ್ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಭೆಯಲ್ಲಿ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT