ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ ಹಿಂದೆ ‘ಉಗ್ರ ನಂಟು’: ಆರೋಪ

Last Updated 18 ನವೆಂಬರ್ 2021, 16:09 IST
ಅಕ್ಷರ ಗಾತ್ರ

ಪಾಲಕ್ಕಾಡ್‌: ಕೇರಳದಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆಗೆ ಭಯೋತ್ಪಾದಕರ ನಂಟಿದೆ ಎಂದು ಗುರುವಾರ ಆರೋಪಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ನವೆಂಬರ್ 15 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ಹತ್ಯೆಗೀಡಾದ ಸಂಜಿತ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ ಆರ್‌ಎಸ್‌ಎಸ್‌ನ ಸಹ ಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ಡಾ.ಮನಮೋಹನ್ ವೈದ್ಯ ಈ ವಿಷಯ ತಿಳಿಸಿದರು.

‘(ಕೇರಳದ) ಸಿಪಿಐ(ಎಂ) ಸರ್ಕಾರದಿಂದ ನ್ಯಾಯ ಸಿಗದೇ ಹೋದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಸಂಜಿತ್ ಹತ್ಯೆಯ ವಿಸ್ತೃತ ಎನ್‌ಐಎ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಹತ್ಯೆಯಲ್ಲಿ ಭಾಗಿಯಾಗಿದ್ದವರಿಗೆ ಭಯೋತ್ಪಾದಕರ ನಂಟಿದೆ. ಇದು ಪೂರ್ವ ನಿಯೋಜಿತ ಕೊಲೆ. ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯ‘ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

‘ನಾವು ಮೃತರ ಕುಟುಂಬದ ಪರವಾಗಿ ದೃಢವಾಗಿ ನಿಲ್ಲುತ್ತೇವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕೇರಳದ ಸರ್ಕಾರವು ಇಂತಹ ಉದ್ದೇಶಿತ ಹತ್ಯೆಗಳನ್ನು ತಡೆಯಲು ವಿಫಲವಾಗಿರುವುದು ಅತ್ಯಂತ ದಯನೀಯ’ ಎಂದು ವೈದ್ಯ ಬೇಸರ ವ್ಯಕ್ತಪಡಿಸಿದರು.

ಸ್ವಯಂಸೇವಕರ ಹತ್ಯೆಯಲ್ಲಿ ಆಡಳಿತಾರೂಢ ಸಿಪಿಐ (ಎಂ) ಮತ್ತು ಇಸ್ಲಾಮಿಕ್‌ ಶಕ್ತಿಗಳ ನಡುವೆ ರಹಸ್ಯ ಹೊಂದಾಣಿಕೆ ಇದೆ. ಇದರ ಬಗ್ಗೆ ನ್ಯಾಯಯುತ ತನಿಖೆ ನಡೆಯಬೇಕು ಎಂದೂ ವೈದ್ಯ ಒತ್ತಾಯಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಕ್ಕೆ ಇರಬಹುದಾದ ಭಯೋತ್ಪಾದಕ ಸಂಪರ್ಕಗಳು ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆರ್‌ಎಸ್‌ಎಸ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ನಾಶಮಾಡುವ ಏಕೈಕ ಗುರಿಯೊಂದಿಗೆ ಪಿಎಫ್‌ಐ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿರುವ ಆರ್‌ಎಸ್‌ಎಸ್‌, ದೇಶದಲ್ಲಿ ಅದರ ಚಟುವಟಿಕೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದೆ.

ಹಾಡಹಗಲೇ ನಡೆದ ಸಂಜಿತ್‌ ಹತ್ಯೆಯ ಹಿಂದೆ ಪಿಎಫ್‌ಐನ ರಾಜಕೀಯ ಶಾಖೆಯಾದ ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)’ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಆರೋಪಿಸಿವೆ.

ಆರ್‌ಎಸ್‌ಎಸ್‌ ಕಾರ್ಯಕರ್ತ, 27 ವರ್ಷದ ಸಂಜಿತ್‌ನನ್ನು ಸೋಮವಾರ ಬೆಳಗ್ಗೆ ಪಾಲಕ್ಕಾಡ್‌ನ ಮಂಬರಂನಲ್ಲಿ ಆತನ ಪತ್ನಿಯ ಎದುರೇ ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT