ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ, ಮತಾಂತರ, ಜನಸಂಖ್ಯೆ ನಿಯಂತ್ರಣ: ಬಿಜೆಪಿ ವಿಜಯ ಮಂತ್ರ

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಆರ್‌ಎಸ್‌ಎಸ್ ತಂತ್ರ
Last Updated 19 ಜುಲೈ 2021, 14:25 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ರಾಮ ಮಂದಿರ ಮತ್ತು ಗೋ ಸಂರಕ್ಷಣೆಯ ಜತೆಗೆ ರಾಷ್ಟ್ರವಾದ, ಹಿಂದುತ್ವ, ಮತಾಂತರ ಮತ್ತು ಜನಸಂಖ್ಯಾ ನಿಯಂತ್ರಣ ನೀತಿಯ ವಿಷಯವನ್ನು ಮುಖ್ಯ ಅಸ್ತ್ರವನ್ನಾಗಿಸಿಕೊಂಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಿರಿಯ ಮುಖಂಡರ ಜತೆಗೂಡಿ ಚುನಾವಣಾ ಕಾರ್ಯತಂತ್ರ ಸಭೆ ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌), ಚುನಾವಣೆಯಲ್ಲಿ ಹಿಂದುತ್ವದ ಸಿದ್ಧಾಂತವನ್ನು ಬಳಸಿಕೊಳ್ಳಲು ಬಿಜೆಪಿಗೆ ಸೂಚಿಸಿದೆ. ಆದರೆ, ಹೊಸದಾಗಿ ರೂಪಿಸಿರುವ ಜನಸಂಖ್ಯಾ ನಿಯಂತ್ರಣ ನೀತಿಯ ವಿಷಯ ಕುರಿತು ಎಚ್ಚರಿಕೆ ವಹಿಸಬೇಕೆಂದೂ ಬಿಜೆಪಿಗೆ ಸಲಹೆ ನೀಡಿದೆ.

ರಾಜ್ಯ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರು ಮತ್ತು ಕಾರ್ಮಿಕವಲಯದಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕೆಂದು ಆರ್‌ಎಸ್ಎಸ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

‘ಲವ್ ಜಿಹಾದ್’ ಮತ್ತು ಮತಾಂತರದ ವಿಷಯಗಳ ಜತೆಗೆ ರಾಷ್ಟ್ರವಾದ ಸಿದ್ಧಾಂತವನ್ನೂ ಚುನಾವಣೆಯಲ್ಲಿ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

‘ಅಭಿವೃದ್ಧಿ ಮತ್ತು ಹಿಂದುತ್ವ ಈ ಎರಡೂ ವಿಷಯಗಳನ್ನು ಬಿಜೆಪಿ ಚುನಾವಣೆಯಲ್ಲಿ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡು ಮತದಾರರಿಗೆ ತಲುಪಿಸಬೇಕು. ರಾಜಕಾರಣವೆಂದರೆ ಸೇವೆ ಎಂದರ್ಥ ಮತ್ತು ದೇಶ ಎಲ್ಲಕ್ಕಿಂತಲೂ ಮಿಗಿಲು ಎನ್ನುವ ಸಂದೇಶವನ್ನು ರವಾನಿಸಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು’ ಎಂದು ಉತ್ತರ ಪ್ರದೇಶದ ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಸೋಮವಾರ ಮಾಹಿತಿ ನೀಡಿದ್ದಾರೆ.

ಜನಸಂಖ್ಯಾ ನೀತಿ ಬಗ್ಗೆ ಎಚ್ಚರಿಕೆ:‘ಉತ್ತರಪ್ರದೇಶದಲ್ಲಿ ಜಾರಿಗೊಳಿಸಲು ಮುಂದಾಗಿರುವ ಜನಸಂಖ್ಯಾ ನಿಯಂತ್ರಣ ನೀತಿಯ ಕುರಿತು ಬಿಜೆಪಿಗೆ ಎಚ್ಚರಿಕೆ ನೀಡಿರುವ ಸಂಘವು, ನೀತಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸಲಹೆ ನೀಡಿದೆ. ಈ ಹಿಂದೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕೂಡಾ ಉತ್ತರ ಪ್ರದೇಶ ಸರ್ಕಾರಕ್ಕೆ ಈ ಕುರಿತು ಎಚ್ಚರಿಕೆ ನೀಡಿತ್ತು. ಈ ಹಿಂದಿನ ನೀತಿಯು ಹಿಂದೂ ವಿರೋಧಿಯಾಗಿದ್ದು, ಅದನ್ನು ಕೈಬಿಟ್ಟು, ಹೊಸ ನೀತಿಯನ್ನು ಪರಿಚಯಿಸಬೇಕು ಎಂದು ಹೇಳಿತ್ತು’ ಎಂದೂ ಮೂಲಗಳು ತಿಳಿಸಿವೆ.

‘ಬಿಜೆಪಿಯು ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಜುಲೈ 24ರಂದು ನಡೆಯಲಿರುವ ಗುರುಪೂರ್ಣಿಮೆಯಂದು ಸಾಧು–ಸಂತರು ಮತ್ತು ಅರ್ಚಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಷ್ಟೇ ಅಲ್ಲ, ಪ್ರತಿ ಬೂತ್‌ನಲ್ಲಿಯೂ ಪಕ್ಷವು ಕಾರ್ಯಕ್ರಮಗಳನ್ನು ಆಯೋಜಿಸಲಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಜಿಹಾದಿಗಳು ಮತಾಂತರಗೊಳಿಸಲು ಕಿವುಡ ಮತ್ತು ಮೂಕ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಲದೇ, ರಾಷ್ಟ್ರೀಯ ಭದ್ರತೆಗೆ ಗಂಭೀರವಾದ ಬೆದರಿಕೆಯನ್ನೂ ಒಡ್ಡಿದ್ದಾರೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT