ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ವಿಶ್ವಾಸಮತ ಸಾಬೀತಿಗೆ ಸೂಚನೆ ಕೊಟ್ಟಿತ್ತು ‘ಸುಪ್ರೀಂ’– ಠಾಕ್ರೆ ಸೋಲು

Last Updated 29 ಜೂನ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ಬುಧವಾರ ಸಂಜೆ ರಾಜೀನಾಮೆ ಘೋಷಿಸಿದ್ದಾರೆ.ವಿಶ್ವಾಸಮತ ಸಾಬೀತು ಮಾಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ನೀಡಿ ಎಂದು ಶಿವಸೇನಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಗುರುವಾರವೇ ವಿಶ್ವಾಸಮತ ಸಾಬೀತುಪಡಿಸಿ’ ಎಂದು ಆದೇಶಿಸಿತ್ತು. ಅದರ ಬೆನ್ನಲ್ಲೇ ಠಾಕ್ರೆ ಈ ನಿರ್ಧಾರಪ್ರಕಟಿಸಿದ್ದಾರೆ. ಜತೆಗೆ ರಾಜ್ಯ ವಿಧಾನ ಪರಿಷತ್ಸದಸ್ಯತ್ವಕ್ಕೂ ಅವರು ರಾಜೀನಾಮೆ ಘೋಷಿಸಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುವುದು ಸ್ಪಷ್ಟವಾಗಿಲ್ಲ. ಮಹಾ ವಿಕಾಸ ಆಘಾಡಿಯ ಭಾಗವಾಗಿದ್ದ ಶಿವಸೇನಾದ 39 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದು, ತಮ್ಮ ಬೆಂಬಲ ವಾಪಸ್ ಪಡೆದಿದ್ದರು. ಈಗ ಈ ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆಯೇ ಅಥವಾ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಿದ್ದಾರೆಯೇ ಎಂದು ಕಾದು ನೋಡ ಬೇಕಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಬಹುಮತವಿಲ್ಲ. ವಿಶ್ವಾಸಮತ ಸಾಬೀತು ಮಾಡಲು ಸೂಚನೆ ನೀಡಿ ಎಂದು ವಿರೋಧ ಪಕ್ಷ ಬಿಜೆಪಿಯ ನಾಯಕ ದೇವೇಂದ್ರ ಫಡಣವೀಸ್‌ ಅವರು ಮಂಗಳವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಗುರುವಾರ 11 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಆದೇಶಿಸಿದ್ದರು. ಈ ಆದೇಶದ ವಿರುದ್ಧ ಶಿವಸೇನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠವು ಬುಧವಾರ ಸಂಜೆ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಬುಧವಾರ ಸಂಜೆ 5ರಿಂದ ರಾತ್ರಿ 8.30ರವರೆಗೆ ವಿಚಾರಣೆ ನಡೆಸಿದ ಪೀಠವು, 9 ಗಂಟೆಯಲ್ಲಿ ಈ ಆದೇಶ ನೀಡಿತ್ತು. ರಾತ್ರಿ 9.30ಕ್ಕೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಉದ್ಧವ್ ಠಾಕ್ರೆ ಅವರು, ರಾಜೀನಾಮೆ ಘೋಷಿಸಿದರು. ಮಹಾ ವಿಕಾಸ ಆಘಾಡಿ ಸರ್ಕಾರ ರಚಿಸಲು ನೆರವು ನೀಡಿದ್ದಕ್ಕಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಠಾಕ್ರೆ ಧನ್ಯವಾದ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ನೇತೃತ್ವದ ನ್ಯಾಯಪೀಠವು, ‘ಜೂನ್ 30ರಂದು ಬೆಳಿಗ್ಗೆ 11ಗಂಟೆಗೆ ವಿಶ್ವಾಸಮತದ ಏಕೈಕ ಕಾರ್ಯಸೂಚಿಯೊಂದಿಗೆ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವುದನ್ನು ನಿಲ್ಲಿಸಲು ನಮಗೆ ಯಾವುದೇ ಆಧಾರವಿಲ್ಲ. ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸದನವೇ ಸೂಕ್ತಮಾರ್ಗ’ ಎಂದು ಅಭಿಪ್ರಾಯಪಟ್ಟಿತು.

ಉಪಸ್ಪೀಕರ್ ಅವರು ತಮ್ಮ ವಿರುದ್ಧ ನೀಡಿರುವ ಅನರ್ಹತೆಯ ನೋಟಿಸ್‌ಗಳನ್ನು ಪ್ರಶ್ನಿಸಿ ಶಿಂಧೆ ಮತ್ತು ಇತರರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 11ರಂದು ನಡೆಸಲು ನಿರ್ಧರಿಸಲಾಗಿದೆ ಎಂದೂ ನ್ಯಾಯಪೀಠವು ತಿಳಿಸಿದೆ.

ಸುಮಾರು ಮೂರೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಂಕ್ಷಿಪ್ತವಾಗಿ ಆದೇಶ ನೀಡಿ, ರಾಜ್ಯಪಾಲರು ಬುಧವಾರ ಹೊರಡಿಸಿದ್ದ ಸೂಚನೆ ಪ್ರಕಾರ ವಿಧಾನಸಭೆಯ ಕಲಾಪಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿತು.

ಶಿವಸೇನಾ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ‘ರಾಜ್ಯಪಾಲರು ದೇವರಲ್ಲ. ಅವರೂ ಮನುಷ್ಯರು. ಅದಕ್ಕಾಗಿಯೇ ನಮಗೆ ಎಸ್.ಆರ್.ಬೊಮ್ಮಾಯಿ ಮತ್ತು ರಾಮೇಶ್ವರ್ ಪ್ರಸಾದ್ ಅವರಂಥ ತೀರ್ಪುಗಳಿವೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ಮಾತುಕತೆಗೆ ಕರೆಯುವ ಬದಲು ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರ ಸಲಹೆಯಿಂದ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯಪಾಲರ ನಿರ್ಧಾರವುಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಪೆಟ್ಟು ನೀಡುತ್ತದೆ. ಉಪಸ್ಪೀಕರ್ ಅವರು ತೀರ್ಮಾನಿಸುವವರೆಗೂ ನ್ಯಾಯಾಲಯವು ವಿಶ್ವಾಸಮತಯಾಚನೆಗೆ ಅವಕಾಶ ನೀಡಬಾರದು’ ಎಂದೂ ಪ್ರತಿಪಾದಿಸಿದರು.

ಶಿವಸೇನಾದ ಆರೋಪವನ್ನು ವಿರೋಧಿಸಿ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ವಿಶ್ವಾಸಮತ ಯಾಚನೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.ಬಂಡಾಯ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್‌.ಕೆ ಕೌಲ್ ಅವರು, ‘ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರವು ತಮ್ಮದೇ ಪಕ್ಷದ ಮತ್ತು ಸದನದಲ್ಲಿ ಬಹುಮತವನ್ನು ಕಳೆದುಕೊಂಡ ನಂತರವೂ ಅಧಿಕಾರಕ್ಕೆ ಅಂಟಿಕೊಂಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT