ಶನಿವಾರ, ಜನವರಿ 23, 2021
28 °C
–ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಪ್ರಾಣಿಗಳನ್ನು ವಶಕ್ಕೆ ಪಡೆಯುವ ನಿಯಮಕ್ಕೆ ಬದಲಾವಣೆ ತರಲು ಸುಪ್ರೀಂ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪ್ರಾಣಿಗಳ ಮಾರಾಟ, ಸಾಗಣೆ ಪ್ರಕರಣಗಳಲ್ಲಿ ಪ್ರಾಣಿಗಳನ್ನು ವಶಕ್ಕೆ ಪಡೆಯುವುದರ ಸಂಬಂಧ 2017ರಲ್ಲಿ ಹೊರಡಿಸಿದ್ದ ನಿಯಮಗಳಿಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಇಲ್ಲವೇ, ಅವುಗಳನ್ನು ಹಿಂದೆ ಪಡೆಯಬೇಕು’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಉಲ್ಲೇಖಿತ ನಿಯಮಗಳು ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆಗೆ ವಿರೋಧಭಾಸವಾಗಿವೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು. ತಿದ್ದುಪಡಿ ಅಥವಾ ವಾಪಸು ಪಡೆಯದಿದ್ದರೆ ನಿಯಮಗಳು ಅಸ್ತಿತ್ವದಲ್ಲಿರುತ್ತವೆ. ಆದರೆ ಕಾನೂನಿನ ಪ್ರಕಾರ, ಕಾಯ್ದೆಯಡಿ ವ್ಯಕ್ತಿ ಶಿಕ್ಷೆಗೆ ಒಳಪಟ್ಟ ಪ್ರಕರಣಗಳಲ್ಲಿ ಮಾತ್ರವೇ ಪ್ರಾಣಿಗಳನ್ನು ವಶಕ್ಕೆ ಪಡೆಯಲು ಅವಕಾಶವಿದೆ ಎಂದು ಹೇಳಿತು.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮ ಸುಬ್ರಹ್ಮಣಿಯನ್ ಅವರಿದ್ದ ಪೀಠವು, ಪ್ರಾಣಿಗಳು ಆಯಾ ವ್ಯಕ್ತಿಗಳ ಜೀವನಾಧಾರವೂ ಆಗಿರುತ್ತವೆ ಎಂದು ಅಭಿಪ್ರಾಯಪಟ್ಟಿತು.

ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಜಯಂತ್ ಕೆ.ಸೂದ್ ಅವರಿಗೆ ಪೀಠವು, ‘ವ್ಯಕ್ತಿಗೆ ಶಿಕ್ಷೆ ಆಗುವ  ಮೊದಲೇ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಸರ್ಕಾರ ವಶಕ್ಕೆ ಪಡೆಯಲಾಗದು’ ಎಂದು ತಿಳಿಸಿತು.

2017ರ ನಿಯಮಗಳ ಕುರಿತು ಸದ್ಯ ಅಧಿಸೂಚನೆ ಹೊರಡಿಸಲಾಗಿದೆ. ಪ್ರಾಣಿಗಳ ಮೇಲೆ ಹಿಂಸೆಯಾಗುತ್ತಿತ್ತು ಎಂಬುದು ಈ ನಿಯಮ ರೂಪಿಸಲು ಕಾರಣ ಎಂದು ಸೂದ್‌ ಪೀಠದ ಗಮನಕ್ಕೆ ತಂದರು.

‘ಪ್ರಾಣಿಗಳು ಸಂಬಂಧಿಸಿದ ಜನರ ಜೀವನಾಧಾರ. ನಾವು ನಾಯಿ ಮರಿ, ಬೆಕ್ಕಿನ ಬಗ್ಗೆ ಮಾತನಾಡುತ್ತಿಲ್ಲ. ಜನರು ತಮ್ಮ ಸಾಕು ಪ್ರಾಣಿಗಳನ್ನು ಅವಲಂಬಿಸಿಯೇ ಬದುಕುತ್ತಾರೆ. ವ್ಯಕ್ತಿಗೆ ಶಿಕ್ಷೆ ವಿಧಿಸುವ ಮೊದಲೇ ಅವುಗಳನ್ನು ವಶಕ್ಕೆ ಪಡೆಯಲಾಗದು. ನಿಮ್ಮ ನಿಯಮಗಳು ವಿರೋಧಾಭಾಸವಾಗಿವೆ. ಅವುಗಳನ್ನು ಹಿಂಪಡೆಯಿರಿ, ಇಲ್ಲ, ತಡೆಯಾಜ್ಞೆ ನೀಡುತ್ತೇವೆ’ ಎಂದು ಪೀಠ ಹೇಳಿತು.

ನಾವು ಈ ವಿಷಯದಲ್ಲಿ ಕಾಯ್ದೆ ಸ್ಪಷ್ಟವಾಗಿದೆ ಎಂಬುದನ್ನು ನಿಮಗೆ ಈ ಮೂಲಕ ಮನವರಿಕೆ ಕಾಯ್ದೆಗೆ ವಿರುದ್ಧವಾದ ನಿಯಮಗಳು ಇರುವ ವಾತಾವರಣ ಸರಿಯಾದುದಲ್ಲ ಎಂದು ಪೀಠ ಸ್ಪಷ್ಟಪಡಿಸಿತು.‌

ಈ ಕುರಿತು ಸ್ಪಷ್ಟ ಸೂಚನೆ ಪಡೆಯುವ ನಿಟ್ಟಿನಲ್ಲಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಬೇಕು ಎಂದು ಸೂದ್ ಕೋರಿದರು. ಬಳಿಕ ಪೀಠವು ವಿಚಾರಣೆಯನ್ನು ಜನವರಿ 11ಕ್ಕೆ ಮುಂದೂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು