ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಶಿಕ್ಷಣಕ್ಕೆ ಪ್ರತಿ ತಿಂಗಳು ₹2,000 ನೀಡಲು ರಾಜ್ಯಗಳಿಗೆ ’ಸುಪ್ರೀಂ‘ ಸೂಚನೆ

ಮಕ್ಕಳ ಪಾಲನಾ ಕೇಂದ್ರಗಳಲ್ಲಿದ್ದ ಪ್ರತಿ ಮಗುವಿನ ಶಿಕ್ಷಣಕ್ಕೆ ನೆರವು
Last Updated 15 ಡಿಸೆಂಬರ್ 2020, 10:42 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಇದ್ದು (ಸಿಸಿಐ), ಈಗ ಅವರ ಪಾಲಕರೊಂದಿಗಿರುವ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ತಿಂಗಳು ₹ 2,000 ನೀಡುವಂತೆ ಸುಪ್ರೀಂಕೋರ್ಟ್‌ ಎಲ್ಲ ರಾಜ್ಯಗಳಿಗೆ ಮಂಗಳವಾರ ಸೂಚನೆ ನೀಡಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಶಿಫಾರಸಿನಂತೆ ಕೆಲವು ಮಕ್ಕಳು ಈಗಲೂ ಈ ಪಾಲನಾ ಕೇಂದ್ರಗಳಲ್ಲಿ ಇದ್ದಾರೆ. ಈ ಮಕ್ಕಳಿಗಾಗಿ ಆನ್‌ಲೈನ್‌ ತರಗತಿಗಳನ್ನು ನಡೆಸುವ ಸಲುವಾಗಿ ಪಾಲನಾ ಕೇಂದ್ರಗಳಿಗೆ ಪುಸ್ತಕ, ಸ್ಠೇಷನರಿ ಸಾಮಗ್ರಿ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು 30 ದಿನಗಳ ಒಳಗಾಗಿ ಒದಗಿಸುವಂತೆಯೂ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌, ಹೇಮಂತ್ ಗುಪ್ತ ಹಾಗೂ ಅಜಯ್‌ ರಸ್ತೋಗಿ ಅವರಿರುವ ನ್ಯಾಯಪೀಠ ಈ ವಿಷಯಕ್ಕೆ ಸಂಬಂಧಿಸಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಈ ನಿರ್ದೇಶನ ನೀಡಿತು.

ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ನೆರವು ನೀಡುತ್ತಿರುವ ವಕೀಲ ಗೌರವ್ ಅಗ್ರವಾಲ್‌ ಅವರು, ಮಕ್ಕಳ ಪಾಲನಾ ಕೇಂದ್ರಗಳಿಗೆ ಬಾಲ ನ್ಯಾಯ ಮಂಡಳಿಗಳೂ ನೆರವು ನೀಡಬೇಕು. ಈ ಕೇಂದ್ರಗಳಲ್ಲಿ ಶಿಕ್ಷಕರನ್ನು ಸಹ ನೇಮಕ ಮಾಡಬೇಕು ಎಂದು ತಿಳಿಸಿದರು.

‘ಮಕ್ಕಳ ರಕ್ಷಣೆ, ಅವರ ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆಯೇ ಎಂಬುದನ್ನು ಮಕ್ಕಳ ಹಕ್ಕುಗಳ ಆಯೋಗ ಖಾತ್ರಿಪಡಿಸಿಕೊಳ್ಳಬೇಕು’ ಎಂದೂ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT