ಶನಿವಾರ, ಜನವರಿ 28, 2023
15 °C

3 ತಿಂಗಳಲ್ಲಿ 48,000 ಕೊಳೆಗೇರಿ ತೆರವುಗೊಳಿಸಲು ರೈಲ್ವೆ ಇಲಾಖೆಗೆ ಸುಪ್ರೀಂ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ ರೈಲ್ವೆ ಹಳಿಗೆ ಹೊಂದಿಕೊಂಡಂತೆ 140 ಕಿ.ಮೀ ಅಂತರದಲ್ಲಿರುವ ಸುಮಾರು 48,000 ಕೊಳೆಗೇರಿಗಳನ್ನು ಮೂರು ತಿಂಗಳ ಅವಧಿಯಲ್ಲಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತೆರವು ಕಾರ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದವಿರಬಾರದು ಎಂದೂ ಸೂಚಿಸಿದೆ.

ಹಂತ ಹಂತವಾಗಿ ಕೊಳೆಗೇರಿಗಳನ್ನು ತೆರವುಗೊಳಿಸಲಾಗುತ್ತದೆ. ಈ ಪ್ರದೇಶದಲ್ಲಿ ಅತಿಕ್ರಮಣಗಳ ತೆರವಿಗೆ ಸಂಬಂಧಿಸಿ ಯಾವುದೇ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ, ತಡೆಯಾಜ್ಞೆ ನೀಡದಂತೆ ನಿರ್ಬಂಧಿಸಿದೆ. ಈಗಾಗಲೇ ಮಧ್ಯಾವಧಿ ಆದೇಶ ಹೊರಡಿಸಿದ್ದರೆ ಅದು ಊರ್ಜಿತದಲ್ಲಿರುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು, ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಈ ಆದೇಶವನ್ನು ಹೊರಡಿಸಿದೆ. ಈ ಪ್ರದೇಶದ ಅತಿಕ್ರಮಣ ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ತಿಂಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿತು.

‘ತೆರವು ಕಾರ್ಯಾಚರಣೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ನಾವು ಎಲ್ಲ ಭಾಗಿದಾರರಿಗೆ ಸೂಚಿಸುತ್ತಿದ್ದೇವೆ. ಸುರಕ್ಷತಾ ವಲಯದಲ್ಲಿ ಆಗಿರುವ ಅತಿಕ್ರಮಣವನ್ನು ಮೂರು ತಿಂಗಳಲ್ಲಿ ತೆರವುಗೊಳಿಸಬೇಕು. ಈ ಕಾರ್ಯಕ್ಕೆ ಯಾವುದೇ ನ್ಯಾಯಾಲಯ ತಡೆಯಾಜ್ಞೆ ನೀಡಬಾರದು’ ಎಂದು ಪೀಠವು ಸ್ಪಷ್ಟಮಾತುಗಳಲ್ಲಿ ಹೇಳಿತು.

ಒಂದು ವೇಳೆ ಯಾವುದೇ ನ್ಯಾಯಾಲಯವು ತಡೆಯಾಜ್ಞೆ ನೀಡಿದರೂ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಪೀಠ ಹೇಳಿತು. ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ತನ್ನ ಆದೇಶದಲ್ಲಿ ದೆಹಲಿಯಲ್ಲಿ ಅತಿಕ್ರಮಣ ತೆರವುಗೊಳಿಸಲು ರೈಲ್ವೆ ಇಲಾಖೆಗೆ ಕಾಲಮಿತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಆದೇಶಿಸಬೇಕು ಎಂದು ಕೋರಿತ್ತು.

‘ಹಂತ ಹಂತವಾಗಿ ಕೊಳೆಗೇರಿಗಳನ್ನು ತೆರವುಗೊಳಿಸಲು ಸಮಗ್ರ ಯೋಜನೆ ರೂಪಿಸಲು ಎಲ್ಲ ಭಾಗೀದಾರರಿಗೆ ನಾವು ನಿರ್ದೇಶನ ನೀಡುತ್ತೇವೆ. ಮೂರು ತಿಂಗಳ ಅವಧಿಯೊಳಗೆ ಸುರಕ್ಷತಾ ವಲಯದಲ್ಲಿರುವ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಇದರಲ್ಲಿ ರಾಜಕೀಯ ಸೇರಿದಂತೆ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು. ಈ ವ್ಯಾಪ್ತಿಯಲ್ಲಿ ಬರುವ ಅತಿಕ್ರಮಣ ತೆರವು ಮಾಡಲು ಯಾವುದೇ ನ್ಯಾಯಾಲಯ ತಡೆಯಾಜ್ಞೆ ನೀಡಬಾರದು’ ಎಂದು ನ್ಯಾಯಾಲಯ ತಿಳಿಸಿತು.

ರೈಲ್ವೆ ಹಳಿಗುಂಟ ಇರುವ ಅತಿಕ್ರಮಣಗಳನ್ನು ತೆರವುಗೊಳಿಸುವದಕ್ಕೆ ಸಂಬಂಧಿಸಿ ತಡೆಯಾಜ್ಞೆ ಇದ್ದರೆ ಅದು ಅನೂರ್ಜಿತವಾಗಲಿದೆ ಎಂದೂ ನ್ಯಾಯಾಲಯ ತಿಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು