ಶನಿವಾರ, ಅಕ್ಟೋಬರ್ 23, 2021
20 °C
ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

ಹೆರಿಗೆ ರಜೆ ಸೌಲಭ್ಯ ಕಾಯ್ದೆ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ತಿಂಗಳಿಗೂ ಕಡಿಮೆ ವಯೋಮಾನದ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಮಾತ್ರ ತಾಯ್ತನದ ರಜೆ ತೆಗೆದುಕೊಳ್ಳಲು ಅರ್ಹ ಎಂಬ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್‌ ಹಾಗೂ ಕೃಷ್ಣ ಮುರಾರಿ ಅವರಿರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ಪ್ರತಿಕ್ರಿಯೆ ಸಲ್ಲಿಸುವಂತೆ ಕಾನೂನು ಮತ್ತು ನ್ಯಾಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ನ್ಯಾಯಪೀಠ ನೋಟಿಸ್‌ ನೀಡಿತು.

ಹೆರಿಗೆ ರಜೆ ಸೌಲಭ್ಯ ಕಾಯ್ದೆಯ ಸೆಕ್ಷನ್‌ 5(4) ಪ್ರಕಾರ, ಮೂರು ತಿಂಗಳಿಗೂ ಕಡಿಮೆ ವಯೋಮಾನದ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಹೆರಿಗೆ ರಜೆ ತೆಗೆದುಕೊಳ್ಳಲು ಅರ್ಹ. ಕಾಯ್ದೆಯ ಈ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ಮೂಲದ ಹಂಸಾನಂದಿನಿ ನಂದೂರಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. 

‘ಕಾಯ್ದೆಯ ಸೆಕ್ಷನ್‌ 5(4) ತಾರತಮ್ಯದಿಂದ ಕೂಡಿದೆ. ಮಗುವನ್ನು ದತ್ತು ತೆಗೆದುಕೊಂಡಿರುವ ತಾಯಂದಿರು, ಅನಾಥ, ಪರಿತ್ಯಕ್ತ ಅಥವಾ ದತ್ತು ನೀಡಲಾದ 5 ವರ್ಷಕ್ಕಿಂತ ಹೆಚ್ಚು ವಯೋಮಾನದ ಮಕ್ಕಳ ವಿಷಯದಲ್ಲಿ ಇದು ತಾರತಮ್ಯ ಮಾಡುತ್ತದೆ. ಹೆರಿಗೆ ರಜೆ ಸೌಲಭ್ಯ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆಯ ಉದ್ದೇಶಕ್ಕೆ ಈ ಸೆಕ್ಷನ್‌ ಸಂಪೂರ್ಣ ವಿರುದ್ಧವಾಗಿದೆ’ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.

‘ಜೈವಿಕ ತಾಯಂದಿರಿಗೆ 26 ವಾರಗಳ ಹೆರಿಗೆ ರಜೆ ಸೌಲಭ್ಯ ನೀಡಲಾಗುತ್ತದೆ. ಮಗುವನ್ನು ದತ್ತು ತೆಗೆದುಕೊಂಡ ತಾಯಂದಿರಿಗೆ 12 ವಾರಗಳ ರಜೆ ಸೌಲಭ್ಯ ಇದೆ. ಹೀಗಾಗಿ, ತಾರತಮ್ಯ ಇರಬಾರದು ಎಂಬ ಸಂವಿಧಾನದ ಆಶಯಕ್ಕೆ ಈ ಸೆಕ್ಷನ್‌ ವಿರುದ್ಧವಾಗಿದೆ’ ಎಂದೂ ಅರ್ಜಿದಾರರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು