ಸೋಮವಾರ, ಸೆಪ್ಟೆಂಬರ್ 20, 2021
25 °C
ಪಿ.ಎಂ ಕೇರ್ಸ್ ನಿಧಿಯಿಂದ ಹಣದ ನೆರವು ಕೋರಿ ಕೋರ್ಟ್ ಮೊರೆ ಹೊಕ್ಕ ಮಹಿಳೆ

ಕೋವಿಡ್‌ಪೀಡಿತನಿಗೆ ಬದಲಿ ಶ್ವಾಸಕೋಶ: ₹ 1 ಕೋಟಿ ನೆರವು ನೀಡಲು ‘ಸುಪ್ರೀಂ’ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದಿಂದಾಗಿ ಭಾರಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ತನ್ನ ಪತಿಗೆ ಪಿ.ಎಂ ಕೇರ್ಸ್ ನಿಧಿಯಿಂದ ₹ 1 ಕೋಟಿ ನೆರವು ನೀಡುವಂತೆ ಕೋರಿದ ಮಹಿಳೆಯ ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿದಾರರಾದ ಶೀಲಾ ಮೆಹ್ರಾ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.

ವಿಚಾರಣೆ ನಡೆಸಿದ ನ್ಯಾಯಪೀಠವು ರೋಗಿಯ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣವನ್ನು ಯಾವ ಹಕ್ಕಿನ ಅಡಿಯಲ್ಲಿ ಮರುಪಾವತಿಸಬಹುದು ಎಂದು ಅರ್ಜಿದಾರರ ಪರ ವಕೀಲ ಕೃಷ್ಣಕುಮಾರ್ ಸಿಂಗ್ ಅವರನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ವೈದ್ಯಕೀಯ ವಿಧಾನಕ್ಕಾಗಿ ಹಣಕಾಸಿನ ನೆರವು ಕೋರುತ್ತಿದ್ದಾರೆ ಎಂದು ತಿಳಿಸಿದರು.

‘ಆರ್ಥಿಕ ಅಡಚಣೆಗಳಿಂದಾಗಿ ಯಾವ ಜೀವವು ಅಂತ್ಯಗೊಳ್ಳಬಾರದು ಮತ್ತು ಪಿ.ಎಂ ಕೇರ್ಸ್ ನಿಧಿಯು ವ್ಯಕ್ತಿಗಳಿಗೆ ಪರಿಹಾರ ನೀಡುವ ರಾಷ್ಟ್ರೀಯ ಪ್ರಯತ್ನವಾಗಿರುವುದರಿಂದ ರಾಜ್ಯವು ಸೂಕ್ತ ಸಂದರ್ಭಗಳಲ್ಲಿ ಅಂದರೆ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವುದು ಕರ್ತವ್ಯ’ ಎಂದು ಅರ್ಜಿದಾರರು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

‘ಅರ್ಜಿದಾರರಿಗೆ ಪಿಎಂಒ ಕಚೇರಿಯಿಂದ ₹ 3ಲಕ್ಷ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹ 2 ಲಕ್ಷ ಮಂಜೂರು ಮಾಡಲಾಗಿದೆ. ಆದರೆ, ಕೋವಿಡ್‌ನಿಂದ ತೀವ್ರ ಹದಗೆಟ್ಟಿರುವ ಮಹಿಳೆಯ ಪತಿಯ ಆರೋಗ್ಯ ಸುಧಾರಣೆಗೆ ಇಷ್ಟು ಹಣ ಸಾಕಾಗುತ್ತಿಲ್ಲ. ಆಸ್ಪತ್ರೆಯ ವೆಚ್ಚವು ದಿನಕ್ಕೆ ₹ 2 ಲಕ್ಷವಿದೆ. ತೀವ್ರ ನ್ಯೂಮೊನಿಯಾ ಮತ್ತು ಉಸಿರಾಟದ ತೊಂದರೆ ಇರುವ ಆತನಿಗೆ ಶ್ವಾಸಕೋಶದ ಕಸಿ ಮಾಡಲು ₹ 1 ಕೋಟಿ ಅಗತ್ಯವಿದೆ’ ಎಂದು ವಕೀಲರು ವಾದಿಸಿದರು.

‘ಮಹಿಳೆಯ ಪತಿಯ ಜೀವ ಉಳಿಸಲು ಅಗತ್ಯವಾದ ಹಣಕಾಸಿನ ನೆರವು ನೀಡುವಲ್ಲಿ ವಿಫಲವಾದರೆ ಸಂವಿಧಾನದ ಕಲಂ 14 ಮತ್ತು 21ರ ಉಲ್ಲಂಘನೆಯಾಗುತ್ತದೆ. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ನಿರ್ದಿಷ್ಟವಾಗಿ ನಾಗರಿಕರಿಗೆ ಆರೋಗ್ಯ ರಕ್ಷಣೆ ನೀಡುವಲ್ಲಿ ರಾಜ್ಯ ನಿಷ್ಕ್ರಿಯವಾಗಿದೆ ಎಂದೂ ಅರ್ಥೈಸಬಹುದು’ ಎಂದೂ ಅವರು ಪ್ರತಿಪಾದಿಸಿದರು.

ಅಂತಿಮವಾಗಿ ನ್ಯಾಯಪೀಠವು, ಈ ಕುರಿತು ಕೇಂದ್ರದಿಂದ ಪ್ರತಿಕ್ರಿಯೆ ಪಡೆಯಲು ನಿರ್ಧರಿಸಿ, ಪ್ರಕರಣವನ್ನು ಆ. 10ಕ್ಕೆ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು