ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ವರಿಷ್ಠರ ನೇಮಕ: ಸೂಕ್ತ ನಿಲುವು ಕೈಗೊಳ್ಳುತ್ತೇವೆ–ಸುಪ್ರೀಂಕೋರ್ಟ್‌

Last Updated 27 ಫೆಬ್ರುವರಿ 2023, 14:28 IST
ಅಕ್ಷರ ಗಾತ್ರ

ನವದೆಹಲಿ (‍ಪಿಟಿಐ): ‘ರಾಜ್ಯಗಳಲ್ಲಿನ ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿದ್ದ ಕಾರ್ಯವಿಧಾನಗಳು ದೆಹಲಿ ಹಾಗೂ ಇತರ ನಗರಗಳ ಪೊಲೀಸ್‌ ಆಯುಕ್ತರ ನೇಮಕಕ್ಕೂ ಅನ್ವಯಿಸುತ್ತದೆಯೇ ಇಲ್ಲವೇ ಎಂಬುದನ್ನು ತಾನು ನಿರ್ಧರಿಸುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಹಿರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ಥಾನ ಅವರನ್ನು ದೆಹಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ‘ಅಸ್ಥಾನ ಅವರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಅವರ ನೇಮಕ ಪ್ರಶ್ನಿಸಿರುವ ಈ ಅರ್ಜಿಗಳು ನಿರರ್ಥಕವಾಗಿವೆ’ ಎಂದು ತಿಳಿಸಿತು.

‘2006ರಲ್ಲಿ ಪ್ರಕಾಶ್‌ ಸಿಂಗ್‌ ಅವರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಡಿಜಿಪಿಗಳನ್ನು ನೇಮಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಹೇಳಿತ್ತು. ಜೊತೆಗೆ ನೇಮಕಾತಿ ವಿಚಾರವಾಗಿ ಕೆಲ ಕಾರ್ಯವಿಧಾನಗಳನ್ನೂ ಸೂಚಿಸಿತ್ತು. ಅಸ್ಥಾನ ನೇಮಕ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನ ಈ ತೀರ್ಪು ಡಿಜಿಪಿಗಳ ನೇಮಕಕ್ಕೆ ಮಾತ್ರ ಅನ್ವಯಿಸುತ್ತದೆ. ದೆಹಲಿ ಸೇರಿದಂತೆ ಇತರೆ ನಗರಗಳ ಪೊಲೀಸ್‌ ಕಮಿಷನರ್‌ಗಳ ಆಯ್ಕೆಗೆ ಇದನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಹೈಕೋರ್ಟ್‌ನ ಈ ತೀರ್ಪು ಪುನರಾವರ್ತಿತ ಪ‍ರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಈ ಸಂಬಂಧ ನಾವು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಏಪ್ರಿಲ್‌ನಲ್ಲಿ ಈ ಕುರಿತ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿಯೂ ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT