ಭಾನುವಾರ, ಅಕ್ಟೋಬರ್ 25, 2020
28 °C
ಬಿಜೆಪಿ ನಾಯಕ ಚಿನ್ಮಯಾನಂದ ಅವರಿಗೆ ಸಂತ್ರಸ್ತೆಯ ಹೇಳಿಕೆ ಪ್ರತಿ ನೀಡಲು ಆದೇಶಿಸಿದ್ದ ಹೈಕೋರ್ಟ್‌

ಆರೋಪಿಗೆ ಸಂತ್ರಸ್ತೆ ಹೇಳಿಕೆಯ ಪ್ರತಿ: ಹೈಕೋರ್ಟ್‌ ಆದೇಶ ರದ್ದುಪಡಿಸಿದ ‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತೆಯು ನೀಡಿರುವ ಹೇಳಿಕೆಯ ಪ್ರತಿಯನ್ನು ಪಡೆಯಲು ಆರೋಪಿ, ಬಿಜೆಪಿ ಮುಖಂಡ ಚಿನ್ಮಯಾನಂದ ಅವರಿಗೆ ಸುಪ್ರೀಂ ಕೋರ್ಟ್‌ ಅವಕಾಶವನ್ನು ನಿರಾಕರಿಸಿದೆ. ಈ ಕುರಿತ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಗುರುವಾರ ರದ್ದುಗೊಳಿಸಿದೆ. 

ಸಿಆರ್‌ಪಿಸಿ ಸೆಕ್ಷನ್‌ 164ರಡಿ ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಿರುವ ಹೇಳಿಕೆಯನ್ನು ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯವಾಗಿ ಮುಂದಿಡಬಹುದು. ಜೊತೆಗೆ ಈ ಹೇಳಿಕೆಯು, ತನಿಖೆಯ ವೇಳೆ ಪೊಲೀಸರಿಗೆ ನೀಡಿರುವ ಹೇಳಿಕೆಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. 

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಶಹಜಹಾನ್‌ಪುರ ಮೂಲದ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌, ವಿನೀತ್‌ ಶರಣ್‌ ಹಾಗೂ ಎಸ್‌.ರವೀಂದ್ರ ಭಟ್‌ ಅವರಿದ್ದ ಪೀಠವು ಈ ಅರ್ಜಿಯನ್ನು ಪುರಸ್ಕರಿಸಿದೆ. ಹೈಕೋರ್ಟ್‌, 2019ರ ನ.7ರಂದು ಸಂತ್ರಸ್ತೆಯ ಹೇಳಿಕೆಯ ಪ್ರತಿಯನ್ನು ಆರೋಪಿಗೆ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಕಳೆದ ವರ್ಷ ನವೆಂಬರ್‌ 15ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿ, ರಾಜ್ಯ ಸರ್ಕಾರ ಹಾಗೂ ಚಿನ್ಮಯಾನಂದ ಅವರಿಂದ ಪ್ರತಿಕ್ರಿಯೆ ಕೇಳಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ 2019 ಸೆ.21ರಂದು ಚಿನ್ಮಯಾನಂದ ಅವರನ್ನು ವಿಶೇಷ ತನಿಖಾ ತಂಡವು ಬಂಧಿಸಿತ್ತು. 23 ವರ್ಷದ ವಿದ್ಯಾರ್ಥಿಯ ವಿರುದ್ಧವೂ ಹಣ ಸುಲಿಗೆ ಆರೋಪದಡಿ ಪ್ರಕರಣ ದಾಖಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು