ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕನ್ವರ್ ಯಾತ್ರೆ'ಗೆ ಅನುಮತಿ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್‌

Last Updated 14 ಜುಲೈ 2021, 17:13 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್‌–19 ಸಾಂಕ್ರಾಮಿಕ ಹರಡುವ ಅಪಾಯದ ನಡುವೆಯೂ ವಾರ್ಷಿಕ ಕನ್ವರ್‌ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದೆ ಎಂಬ ಮಾಧ್ಯಮ ವರದಿಯು ಕಳವಳಕ್ಕೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ‘ಕನ್ವರ್ ಯಾತ್ರೆ’ಗೆ ಅನುಮತಿ ನೀಡಿದ್ದರ ಸಂಬಂಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಶುಕ್ರವಾರದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಶಿವನ ಭಕ್ತರು ಗಂಗಾ ನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಇದೇ 25ರಿಂದ ಆಗಸ್ಟ್‌ 6ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಕೋವಿಡ್‌ ಸಾಂಕ್ರಾ ಮಿಕದ ಮಧ್ಯೆಯೇ ಕನ್ವರ್ ಯಾತ್ರೆ ನಡೆಸಲು ಈಗಾಗಲೇ ಹಲವು ಭಕ್ತರ ಅಖಾಡಗಳು ಸಿದ್ಧತೆ ನಡೆಸಿವೆ. ಹೀಗಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ. ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ.

‘ಕನ್ವರ್ ಯಾತ್ರೆ ನಡೆಸಲು ಸಿದ್ಧತೆ ನಡೆದಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇದನ್ನು ನೋಡಿ ದೇಶದ ಜನರು ಭಾರಿ ಗೊಂದಲಕ್ಕೆ ಒಳಗಾ ಗಿದ್ದಾರೆ. ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಕೋವಿಡ್‌ನ ಮೂರನೇ ಅಲೆ ದೇಶಕ್ಕೆ ಅಪ್ಪಳಿಸಲಿರುವ ಹೊಸ್ತಿಲಲ್ಲ, ಕೋವಿಡ್‌ ಮಾರ್ಗಸೂಚಿ ಪಾಲನೆಯಲ್ಲಿ ಸ್ವಲ್ಪವೂ ರಾಜಿ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಸಮಯದಲ್ಲೇ ಯಾತ್ರೆಗೆ ಸಿದ್ಧತೆ ನಡೆದಿದೆ’ ಎಂದು ಪೀಠವು ಕಳವಳ ವ್ಯಕ್ತಪಡಿಸಿದೆ.

ಕನ್ವರ್ ಯಾತ್ರೆ ನಡೆಸುವುದಿಲ್ಲ ಎಂದುನೋಟಿಸ್ ಜಾರಿಯಾಗುವ ಮುನ್ನವೇ ಉತ್ತರಾಖಂಡ ಸರ್ಕಾರವು ಘೋಷಿಸಿದೆ. ‘ಕೋವಿಡ್‌ ಸಾಂಕ್ರಾಮಿಕ ಇನ್ನೂ ಇದೆ. ರಾಜ್ಯದಲ್ಲಿ ಹೊಸ ತಳಿಯ ಕೊರೊನಾವೈರಾಣು ಪತ್ತೆಯಾಗಿದೆ. ಹರಿದ್ವಾರವೇ ಮೂರನೇ ಅಲೆಯ ಕೇಂದ್ರ ಸ್ಥಾನವಾಗಲು ನಮ್ಮ ಸರ್ಕಾರವು ಅವಕಾಶ ಮಾಡಿಕೊಡುವುದಿಲ್ಲ. ಜನರ ಜೀವದ ಜತೆ ನಾವು ಆಟವಾಡುವುದಿಲ್ಲ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸಲು ಭಾರಿ ಸಿದ್ಧತೆ ನಡೆದಿದೆ. ರಾಜ್ಯದಲ್ಲಿರುವ ಗಂಗಾ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ನಡೆಸಲು ಮತ್ತು ಗಂಗಾ ಜಲ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ಇದಕ್ಕೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಸಂಬಂಧಿತ ಕಾರ್ಯದರ್ಶಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ಸೂಚನೆಯಲ್ಲಿ ವಿವರಿಸಿದೆ.

2021ರ ಮಾರ್ಚ್‌ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದರು. ಕೋವಿಡ್‌ ಮಾರ್ಗಸೂಚಿಯನ್ನು ಕಡೆಗಣಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹಲವರಿಗೆ ಕೋವಿಡ್‌ ತಗುಲಿತ್ತು. ಮೇಳ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT