ಬುಧವಾರ, ಜನವರಿ 20, 2021
16 °C

ಮೋದಿ ಆಯ್ಕೆ ಪ್ರಶ್ನಿಸಿದ್ದ ಮಾಜಿ ಯೋಧನ ಅರ್ಜಿ ಕುರಿತ ತೀರ್ಪು ನಾಳೆ ಪ್ರಕಟ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಪ್ರಶ್ನಿಸಿ ಬಿಎಸ್‌ಎಫ್ ಮಾಜಿ ಯೋಧ ತೇಜ್ ಬಹದ್ದೂರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಾದಿರಿಸಿದ್ದ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಾಹ್ನ ಪ್ರಕಟಿಸಲಿದೆ.

ಮುಖ್ಯನ್ಯಾಯಮೂರ್ತಿ ಎಸ್‌.ಎ ಬೋಬಡೆ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ. ನ.18ರಂದು ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಕಾದಿರಿಸಿತ್ತು.

ವಕೀಲ ಪ್ರದೀಪ್‌ ಯಾದವ್‌ ಅವರು ತೇಜ್‌ ಬಹದ್ದೂರ್‌ ಅವರ ಪರ ವಾದಿಸಿದ್ದರೆ, ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು.

ಬಿಎಸ್‌ಎಫ್‌ನಿಂದ 2017ರಲ್ಲಿ ವಜಾ ಆಗಿದ್ದ ಯೋಧ ತೇಜ್ ಬಹದ್ದೂರ್ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಸಲ್ಲಿಸಿದ್ದರು. ‘ಬಿಎಸ್‌ಎಫ್‌ನಿಂದ ಭ್ರಷ್ಟಾಚಾರದ ಆರೋಪದಲ್ಲಿ ವಜಾ ಮಾಡಿಲ್ಲ’ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಇದರ ವಿರುದ್ಧ ಅವರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ಅಧಿಕಾರಿಯು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ನಾಮಪತ್ರ ತಿರಸ್ಕರಿಸಿದ್ದಾರೆ. ಪ್ರಮಾಣಪತ್ರ ಪಡೆದುಕೊಳ್ಳಲು ನನಗೆ ಅಗತ್ಯವಾದ ಸಮಯಾವಕಾಶ ನೀಡಿಲ್ಲ. ಹೀಗಾಗಿ ನರೇಂದ್ರ ಮೋದಿ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಅವರ ಅರ್ಜಿ ಯನ್ನು ಹೈಕೋರ್ಟ್ ವಜಾಮಾಡಿತ್ತು. ಅದರ ವಿರುದ್ಧ ತೇಜ್ ಬಹದ್ದೂರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸೂಚಿಸಿತ್ತು. ಇದಕ್ಕೆ ಸಮಯಾವಕಾಶ ಬೇಕು ಎಂದು ಅರ್ಜಿದಾರರು ಕೋರಿದ್ದರು. ಹೀಗಾಗಿ 4 ಬಾರಿ ವಿಚಾರಣೆ ಯನ್ನು ಮುಂದೂಡಲಾಗಿತ್ತು. ನ.18ರಂದು ಮತ್ತೊಂದು ಬಾರಿ ಕಾಲವಕಾಶ ಕೋರಲಾಗಿತ್ತು. ಇದನ್ನು ಪೀಠವು ತಿರಸ್ಕರಿಸಿತ್ತು. ಅಲ್ಲದೆ, ತೀರ್ಪು ಕಾದಿರಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು