ಶುಕ್ರವಾರ, ಮಾರ್ಚ್ 5, 2021
30 °C
ಕೇವಲ 4 ಸಾವಿರ ಗಣ್ಯರು ಭಾಗಿ / ಎದ್ದುಕಂಡ ಶಾಲಾ ಮಕ್ಕಳ ಗೈರು

ಸರಳವಾಗಿ ನಡೆದ ಸ್ವಾತಂತ್ರ್ಯ ದಿನಾಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಂಡಿರುವ ಸಭಿಕರ ನಡುವೆ ಎದ್ದುಕಾಣುವ ಉತ್ಸಾಹಿ ಶಾಲಾ ಮಕ್ಕಳ ಗೈರು, ಬೆರಳೆಣಿಕೆಯ ಗಣ್ಯರು..ಇದು ದೆಹಲಿಯ ಕೆಂಪುಕೋಟೆಯಲ್ಲಿ ಶನಿವಾರ ಕಂಡುಬಂದ ದೃಶ್ಯ.

ಪ್ರತಿ ವರ್ಷ ಆಗಸ್ಟ್‌ 15ರಂದು ಬೆಳಗ್ಗೆ ಸಾವಿರಾರು ಜನರು, ಮಕ್ಕಳಿಂದ ಗಿಜುಗುಡುತ್ತಿದ್ದ ಕೆಂಪು ಕೋಟೆಯ ಚಿತ್ರಣ ಈ ವರ್ಷ ಸಂಪೂರ್ಣ ಭಿನ್ನವಾಗಿತ್ತು. ಕೋವಿಡ್‌–19 ಪಿಡುಗಿನ ಕಾರಣದಿಂದ ಈ ಬಾರಿ ಕೇವಲ 4 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಮುಖಗವಸು ಧರಿಸಿ, ಪರಸ್ಪರ ಆರು ಅಡಿ ಅಂತರದಲ್ಲಿ ಕುಳಿತಿದ್ದರು. ಪ್ರತಿ ಕುರ್ಚಿಯಲ್ಲೂ ಮುಖಗವಸು, ಸ್ಯಾನಿಟೈಸರ್‌, ಕೈಗವಸು ಇದ್ದ ಕಿಟ್‌ ಅನ್ನು ಇಡಲಾಗಿತ್ತು. ಎಂದಿಗಿಂತ ಕಡಿಮೆಯೇ ಗಣ್ಯರ ಪಟ್ಟಿ ಸಿದ್ಧಪಡಿಸಲಾಗಿತ್ತು. ಪಿಡುಗಿನ ಕಾರಣದಿಂದಾಗಿ ಆಹ್ವಾನಿಸಿದ್ದ ಗಣ್ಯರಲ್ಲೂ ಕೆಲವರು ಗೈರಾಗಿದ್ದರು. 

ಪ್ರವೇಶ ದ್ವಾರದಲ್ಲೇ ಪಿಪಿಇ ಕಿಟ್‌ ಧರಿಸಿದ್ದ ಭದ್ರತಾ ಸಿಬ್ಬಂದಿಗಳು ಗಣ್ಯರ ದೇಹದ ಉಷ್ಣಾಂಶವನ್ನು ಸ್ಕ್ಯಾನರ್‌ ಮುಖಾಂತರ ಪರಿಶೀಲಿಸಿ ಒಳಬಿಡುತ್ತಿದ್ದರು.  

ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಬಣ್ಣದ ದಿರಿಸು ಧರಿಸಿ ಬರುತ್ತಿದ್ದರು. ಆದರೆ ಈ ಬಾರಿ ಶಾಲಾ ವಿದ್ಯಾರ್ಥಿಗಳ ಬದಲಾಗಿ ಕೇವಲ 500 ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದರು. ಇದನ್ನು ತಮ್ಮ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ‘ಕೋವಿಡ್‌–19 ಪಿಡುಗು ನಮ್ಮಲ್ಲರಿಗೂ ತಡೆಒಡ್ಡಿದೆ. ಹೀಗಾಗಿ ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿಲ್ಲ’ ಎಂದಿದ್ದರು. 

ಬಿಗಿ ಭದ್ರತೆ: ಕೆಂಪುಕೋಟೆ ಸುತ್ತಮುತ್ತ ಅಂದಾಜು 4 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಗೌರವ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 350 ದೆಹಲಿ ಪೊಲೀಸ್‌ ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು