ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಭದ್ರತೆ ಲೋಪ: ‘ಸುಪ್ರೀಂ’ ವಿಚಾರಣೆ ಇಂದು

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಲೋಪದ ಚರ್ಚೆ: ಅಸಾಧಾರಣ ಕ್ರಮಕ್ಕೆ ಸಚಿವರ ಒತ್ತಾಯ
Last Updated 6 ಜನವರಿ 2022, 18:53 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಬುಧವಾರ ಭೇಟಿ ಕೊಟ್ಟಾಗ ಉಂಟಾದ ಭದ್ರತಾ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಭವಿಷ್ಯದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸದಂತೆ ಖಾತರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಧಾನಿಯವರ ವಾಹನ ಸಾಲು ಭಟಿಂಡಾದಲ್ಲಿ ಸ್ವಲ್ಪ ಹೊತ್ತು ಸ್ಥಗಿತವಾಗಿತ್ತು. ಪ್ರಧಾನಿಯವರು ರ್‍ಯಾಲಿಯೊಂದರಲ್ಲಿ ಭಾಗವಹಿಸಬೇಕಿತ್ತು. ಆದರೆ, ಭದ್ರತಾ ಲೋಪದ ಬಳಿಕ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸದೆಯೇ ಹಿಂದಿರುಗಿದ್ದರು.

‘ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಿ. ನಾಳೆ (ಶುಕ್ರವಾರ) ಮೊದಲನೆಯದಾಗಿ ಈ ಅರ್ಜಿಯ ವಿಚಾರಣೆ ನಡೆಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಹೇಳಿದೆ.

ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಇಂದೇ (ಗುರುವಾರ) ನಡೆಸಬೇಕು ಎಂದು ಅವರು ಕೋರಿದ್ದರು. ಪಂಜಾಬ್‌ ಪೊಲೀಸರು ಪಂಜಾಬ್‌ ಭೇಟಿಗಾಗಿ ಮಾಡಿದ್ದ ಭದ್ರತಾ ವ್ಯವಸ್ಥೆಯ ಎಲ್ಲ ಸಾಕ್ಷ್ಯಗಳನ್ನು ಸುಪರ್ದಿಗೆ ತೆಗೆದುಕೊಳ್ಳುವಂತೆ ಭಟಿಂಡಾ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಪಂಜಾಬ್‌ನಲ್ಲಿ ಈಗ ಇರುವ ಪರಿಸ್ಥಿತಿಯಲ್ಲಿ ಲೋಪದ ಬಗ್ಗೆ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಹಾಗಾಗಿ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಖಾತರಿಪಡಿಸುವುದಕ್ಕಾಗಿ ಲೋಪಕ್ಕೆ ಹೊಣೆ ಯಾರು ಎಂಬುದನ್ನು ಗುರುತಿಸುವುದಕ್ಕೂ ಸಾಧ್ಯವಾಗದು’ ಎಂದು ಮಣೀಂದರ್‌ ಅವರು ಪ್ರತಿಪಾದಿಸಿದ್ದಾರೆ.

‘ನಮ್ಮಿಂದ ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ’ ಎಂದು ಪೀಠವು ಮಣೀಂದರ್‌ ಅವರನ್ನು ಪ್ರಶ್ನಿಸಿತು.

‘ಇಂತಹ ಘಟನೆಯು ಮರುಕಳಿಸಬಾರದು. ವೃತ್ತಿಪರ ಮತ್ತು ಪರಿಣಾಮಕಾರಿ ತನಿಖೆ ಆಗಬೇಕು. ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಅದುವೇ ಸರಿಯಾದ ನಡೆ’ ಎಂದು ಮಣೀಂದರ್‌ ಹೇಳಿದರು.

‘ಲಾಯರ್ಸ್‌ ವಾಯ್ಸ್‌’ ಸಂಸ್ಥೆಯ ಪರವಾಗಿ ಮಣೀಂದರ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಭದ್ರತಾ ಲೋಪವು ಉದ್ದೇಶಪೂರ್ವಕ. ರಾಷ್ಟ್ರೀಯ ಭದ್ರತೆ ಮತ್ತು ಈಗ ಇರುವ ರಾಜ್ಯ ಸರ್ಕಾರದ ಕುರಿತು ಇದು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಸಂಪುಟದಲ್ಲಿ ಚರ್ಚೆ: ಪ್ರಧಾನಿಯ ಭದ್ರತೆಯಲ್ಲಿ ಆಗಿರುವ ಲೋಪದ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಸಚಿವರಲ್ಲಿ ಹಲವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಲೋಪಕ್ಕೆ ಕಾರಣ ಆಗಿರುವವರ ವಿರುದ್ಧ ಅಸಾಧಾರಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಪ್ರಧಾನಿಯ ಭೇಟಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT