ಗುರುವಾರ , ಮಾರ್ಚ್ 30, 2023
24 °C

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅಂತ್ಯಕ್ರಿಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಇಲ್ಲಿನ ಹೊರವಲಯದಲ್ಲಿರುವ ಹೈದರ್‌ಪುರ ನಿವಾಸದಲ್ಲಿ ಬುಧವಾರ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಂತ್ಯಕ್ರಿಯೆ ಕಟ್ಟುನಿಟ್ಟಿನ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಇಲ್ಲಿನ ಮಸೀದಿಯೊಂದರಲ್ಲಿ ಗುರುವಾರ ಮುಂಜಾನೆ ನೆರವೇರಿತು.

ಗಿಲಾನಿ ಅಪೇಕ್ಷೆಯಂತೆ, ಅವರ ನಿವಾಸದ ಸಮೀಪವಿರುವ ಮಸೀದಿಯ ಖಬರ್‌ಸ್ತಾನದಲ್ಲಿ ಸಮಾಧಿ ಮಾಡಲಾಯಿತು.

ದೇಶವಿರೋಧಿ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು, ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಸಂಚು ರೂಪಿಸುತ್ತಿದ್ದಾರೆಂಬ ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ, ರಾತ್ರಿಯೇ ಅಂತ್ಯಕ್ರಿಯೆ ನಡೆಸುವಂತೆ ಅಧಿಕಾರಿಗಳು ಗಿಲಾನಿ ಕುಟುಂಬ ಸದಸ್ಯರಿಗೆ ತಿಳಿಸಿದ್ದರು.

ನಂತರ ತೀವ್ರ ಬಿಗಿ ಭದ್ರತೆಯಲ್ಲಿ ಗಿಲಾನಿ ಅವರ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮೊಬೈಲ್‌ ಫೋನ್‌ಗಳನ್ನು ನಿರ್ಬಂಧಿಸಲಾಗಿತ್ತು. ‘ಬಿಗಿ ಪೊಲೀಸ್ ಭದ್ರತೆಯಲ್ಲಿ, ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರವೇ ಖಬರ್‌ಸ್ತಾನದಲ್ಲಿ ಗಿಲಾನಿಯವರ ಮೃತದೇಹವನ್ನು ಸಮಾಧಿ ಮಾಡಲಾಯಿತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಿಲಾನಿಯವರ ಪುತ್ರ ನಯೀಮ್, ‘ನನ್ನ ತಂದೆ ಈದ್ಗಾ ಮಸೀದಿಯಲ್ಲಿ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದರು‘ ಎಂದು ಹೇಳಿದರು. ಹೈದರಾಪುರದ ಮಸೀದಿ ಸಮೀಪದ ಖಬರ್‌ಸ್ತಾನದಲ್ಲಿ ತನ್ನ ಸಮಾಧಿಯಾಗಬೇಕೆಂದು ಗಿಲಾನಿ ಬಯಸಿದ್ದಾಗಿ ಅವರ ಆಪ್ತರು ತಿಳಿಸಿದರು.

ಅಂತ್ಯಕ್ರಿಯೆ ವೇಳೆ, ಕಣಿವೆ ರಾಜ್ಯದಾದ್ಯಂತ ಜನರು ಗುಂಪು ಸೇರದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.

ವದಂತಿ ಮತ್ತು ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಿಎಸ್‌ಎನ್‌ಎಲ್‌ನ ಪೋಸ್ಟ್-ಪೇಯ್ಡ್ ಸಂಪರ್ಕಗಳನ್ನು ಹೊರತುಪಡಿಸಿ ಮೊಬೈಲ್ ಫೋನ್ ಸೇವೆಗಳನ್ನು  ಮತ್ತು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು