ಬುಧವಾರ, ಮಾರ್ಚ್ 22, 2023
22 °C

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ಧಾರಗಳು ಕಾನೂನುಬಾಹಿರ: ಕೇಜ್ರಿವಾಲ್ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸುಪ್ರೀಂ ಕೋರ್ಟ್‌ನ 2018ರ ತೀರ್ಪಿನ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಹಲವು ಆದೇಶಗಳು ಕಾನೂನುಬಾಹಿರವಾಗಿವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ. 

ಲೆ. ಗವರ್ನರ್ ಜತೆಗಿನ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ‘ಆಡಳಿತದ ವಿಚಾರದಲ್ಲಿ ರಾಜಕೀಯವನ್ನು ದೂರವಿಡುವಂತೆ ಸಕ್ಸೇನಾ ಅವರಿಗೆ ಹೇಳಿದ್ದೇನೆ’ ಎಂದೂ ತಿಳಿಸಿದ್ದಾರೆ. 

‘ಲೆ. ಗವರ್ನರ್ ಅವರು ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಇದರಿಂದ ದೆಹಲಿ ಜನರಿಗೆ ಅನನುಕೂಲವಾಗುತ್ತಿದೆ.  ಈ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಉದ್ದೇಶವಾಗಿತ್ತು, ಅದಕ್ಕಾಗಿಯೇ ಅವರೊಂದಿಗೆ ನಡೆಸಿದ ಸಭೆಗೆ ನಾನು ಸಂವಿಧಾನ, ಮೋಟಾರು ವಾಹನ ಕಾಯ್ದೆ, ಶಾಲಾ ಶಿಕ್ಷಣ ಕಾಯ್ದೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಗಳನ್ನು ಕೊಂಡೊಯ್ದಿದ್ದೆ’ ಎಂದು ಅವರು ಹೇಳಿದ್ದಾರೆ.

‘ದೆಹಲಿಯಲ್ಲಿ ಎರಡು ರೀತಿಯ ವಿಷಯಗಳಿವೆ. ಒಂದು ‘ಮೀಸಲು ವಿಷಯಗಳು’ (ಪೊಲೀಸ್, ಭೂಮಿ, ಸಾರ್ವಜನಿಕ ಆದೇಶಗಳು– ಈ ಬಗ್ಗೆ ಮಾತ್ರ ಎಲ್‌.ಜಿ. ಅವರು ನಿರ್ಧಾರ ತೆಗೆದುಕೊಳ್ಳಬಹುದು) ಮತ್ತೊಂದು ‘ವರ್ಗಾವಣೆಗೊಂಡ ವಿಷಯಗಳು’. ಈ ಎಲ್ಲ ವಿಷಯಗಳು ದೆಹಲಿ ಸರ್ಕಾರದ ಅಡಿಯಲ್ಲಿ ಬರುತ್ತವೆ. ಜುಲೈ 4ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ವರ್ಗಾವಣೆಗೊಂಡ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ ವಹಿಸಲಾಗಿಲ್ಲ ಎಂದು ತೀರ್ಪು ನೀಡಿದೆ. ಹಾಗಾಗಿ ಕೆಲವು ವಿಷಯಗಳಲ್ಲಿ ಎಲ್.ಜಿ ಅವರು ನ್ಯಾಯಾಂಗ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಬಹುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘ಶಿಕ್ಷಕರ ತರಬೇತಿ ತಡೆದ ಎಲ್.ಜಿ’: ಸರ್ಕಾರಿ ಶಾಲಾ ಶಿಕ್ಷಕರನ್ನು ಫಿನ್‌ಲೆಂಡ್‌ ತರಬೇತಿಗಾಗಿ ಕಳುಹಿಸುವ ದೆಹಲಿ ಸರ್ಕಾರದ ಪ್ರಸ್ತಾವವನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ತಡೆದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದೂರಿದ್ದಾರೆ.

ಆದರೆ, ಈ ಆರೋಪವನ್ನು ಲೆ.ಗವರ್ನರ್ ಅವರ ರಾಜ್ ನಿವಾಸದ ಮೂಲಗಳು ಅಲ್ಲಗಳೆದಿವೆ. 

ಕೇಜ್ರಿವಾಲ್ ಹೇಳಿಕೆ ದಾರಿ ತಪ್ಪಿಸುವಂತಿವೆ’

ನವದೆಹಲಿ: ‘ಲೆಫ್ಟಿನೆಂಟ್ ಗವರ್ನರ್ ಅವರ ವಿರುದ್ಧ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಆರೋಪಗಳು ದಾರಿ ತಪ್ಪಿಸುವಂತಿವೆ’ ಎಂದು ಲೆ. ಗವರ್ನರ್ ಅವರ ರಾಜ್ ನಿವಾಸದ ಮೂಲಗಳು ಪ್ರತಿಕ್ರಿಯೆ ನೀಡಿವೆ. 

‘ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಅವರು ನೀಡಿರುವ ಹೇಳಿಕೆಗಳು ನಿರ್ದಿಷ್ಟ ಕಾರ್ಯಸೂಚಿಗೆ ತಕ್ಕಂತೆ ತಿರುಚಲ್ಪಟ್ಟಿವೆ’ ಎಂದೂ ಮೂಲಗಳು ಹೇಳಿವೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು