ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೆ ಗಂಗಾಸಾಗರ್ ಸೇರ್ಪಡೆ: ಅಮಿತ್‌ ಶಾ ಭರವಸೆ

Last Updated 18 ಫೆಬ್ರುವರಿ 2021, 13:50 IST
ಅಕ್ಷರ ಗಾತ್ರ

ಗಂಗಾಸಾಗರ್(ಪಶ್ಚಿಮಬಂಗಾಳ) : ‘ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತ ರಚಿಸುವ ಸಂಪೂರ್ಣ ನಂಬಿಕೆ ಇದೆ. ಆಗ ಗಂಗಾಸಾಗರ ಮೇಳ (ಉತ್ತರಾಯಣ ಮೇಳ) ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೂ ಸೇರಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕಪಿಲಮುನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಗಂಗಾನದಿ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಕಪಿಲಮುನಿ ದೇಗುಲವು ಆಧ್ಯಾತ್ಮಿಕತೆ ಮತ್ತು ಪರಿಸರ ಸಂರಕ್ಷಣೆಯ ಸಂಕೇತವಾಗಿದೆ. ವಾರ್ಷಿಕ ಲಕ್ಷಾಂತರ ಯಾತ್ರಾರ್ಥಿಗಳು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಇಲ್ಲಿನ ಸೌಲಭ್ಯಗಳು ಅತ್ಯುತ್ತಮವಾಗಿಲ್ಲ. ಈ ಬಗ್ಗೆ ಬೇಸರವಿದೆ ಎಂದರು.

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇಂದ್ರದ ಎಲ್ಲ ಪ್ರವಾಸೋದ್ಯಮ ಯೋಜನೆಗಳನ್ನು ಇಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗುವುದು. ಗಂಗಾ ನದಿ ಸ್ವಚ್ಛಗೊಳಿಸುವ ‘ನವಾಮಿ ಗಂಗೆ’ಯನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಗಂಗಾಸಾಗರ ವೇಳವನ್ನು ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೆ ಸೇರಿಸಲಾಗುವುದು. ಇದು ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಡಲಿದ್ದು, ಇದರ ಖ್ಯಾತಿಯೂ ವಿಶ್ವಕ್ಕೆ ಹರಡಲಿದೆ ಎಂದು ಶಾ ಹೇಳಿದರು.

ಪ್ರಧಾನಿ ಮೋದಿ ಅವರು 2014ರಲ್ಲಿ ಪ್ರಾರಂಭಿಸಿದ ‘ನಮಾಮಿ ಗಂಗೆ’ ಯೋಜನೆಯು ಗಂಗೋತ್ರಿಯಿಂದ ಸಾಗರ್‌ವರೆಗೆ ಗಂಗಾ ನದಿಯ ಸಂರಕ್ಷಣೆ ಮತ್ತು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ. ಆದರೆ, ಇದು ಪಶ್ಚಿಮ ಬಂಗಾಳವನ್ನು ತಲುಪುವಲ್ಲಿ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ‘ನಮಾಮಿ ಗಂಗೆ’ ಯೋಜನೆಯ ಮೂಲಕ ಗಂಗಾ ನದಿಯ ಶುದ್ಧೀಕರಣವನ್ನು ಗಂಗಾಸಾಗರ್‌ವರೆಗೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

‘ಕಟ್ ಮನಿ’ ಸಂಸ್ಕೃತಿಗೆ ಕೊನೆ: ಶಾ

ಕಾಕ್‌ದ್ವೀಪ್‌ (ಪಶ್ಚಿಮಬಂಗಾಳ): ‘ತೃಣಮೂಲ ಕಾಂಗ್ರೆಸ್‌ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ‘ಕಟ್-ಮನಿ’ (ಹಣ ಕಡಿತ) ಸಂಸ್ಕೃತಿ ಪರಿಚಯಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಅಧಿಕಾರ ನೀಡಿದರೆ, ಈ ಸಂಸ್ಕೃತಿಯನ್ನು ಕೊನೆಗಾಣಿಸಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇಲ್ಲಿ ಪಕ್ಷ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ಪಕ್ಷದ ‘ಪರಿವರ್ತನಾ ಯಾತ್ರೆ’ ಮುಖ್ಯಮಂತ್ರಿ, ಶಾಸಕ ಅಥವಾ ಸಚಿವರನ್ನು ಬದಲಿಸುವುದಲ್ಲ. ಅಕ್ರಮ ವಲಸಿಗರ ಒಳನುಸುಳುವಿಕೆ ಕೊನೆಗೊಳಿಸಿ, ಪಶ್ಚಿಮ ಬಂಗಾಳವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸುವುದಾಗಿದೆ. ಬಿಜೆಪಿಗೆ ಮತ ನೀಡಿದರೆ, ಗಡಿಯಲ್ಲಿ ಅಕ್ರಮ ವಲಸಿಗರ ಒಳನುಸುಳುವಿಕೆ ಬಿಡಿ, ಒಂದು ಪಕ್ಷಿಯೂ ಸಹ ಗಡಿ ನುಸುಳಿ ಬರಲು ಆಗದಂತೆ ಮಾಡುತ್ತೇವೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದರಿಂದಾಗಿ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ನೀಡುತ್ತಿಲ್ಲ. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡುವ ಮೂಲಕ ಶಾ, ಸರ್ಕಾರಿ ನೌಕರರ ಮನಗೆಲ್ಲುವ ಪ್ರಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT