ಶುಕ್ರವಾರ, ಮೇ 20, 2022
21 °C
ಶಹೀನ್‌ಬಾಗ್‌ಗೆ ಬಂದ ಬುಲ್ಡೋಜರ್‌ಗಳಿಗೆ ಸ್ಥಳೀಯರಿಂದ ತಡೆ

ಪ್ರತಿರೋಧ: ತೆರವು ಕಾರ್ಯಾಚರಣೆ ತೊರೆದ ಎಸ್‌ಡಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದಕ್ಷಿಣ ದೆಹಲಿ ಮಹಾನಗರಪಾಲಿಕೆಯು (ಎಸ್‌ಡಿಎಂಸಿ) ಶಹೀನ್‌ ಬಾಗ್‌ ಪ್ರದೇಶದಲ್ಲಿ ಸೋಮವಾರ ನಡೆಸಲು ಉದ್ದೇಶಿಸಿದ್ದ ‘ಅಕ್ರಮ ಕಟ್ಟಡ’ ತೆರವು ಕಾರ್ಯಾಚರಣೆಯು ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾಯಿತು. ಭಾರಿ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಬುಲ್ಡೋಜರ್‌ಗಳು ಬಂದಾಗ ಮಹಿಳೆಯರು ಸೇರಿದಂತೆ ನೂರಾರು ಜನರು ಪ್ರತಿಭಟನೆ ನಡೆಸಿದರು. ಹೀಗಾಗಿ ತೆರವು ಕಾರ್ಯಾಚರಣೆಯ ಸಿಬ್ಬಂದಿ ಹಿಂದಿರುಗಬೇಕಾಯಿತು.

ಎಎಪಿ ಮತ್ತು ಕಾಂಗ್ರೆಸ್‌ ಮುಖಂಡರು ಸ್ಥಳಕ್ಕೆ ಧಾವಿಸಿ, ಧರಣಿ ನಡೆಸಿದರು. ಎಸ್‌ಡಿಎಂಸಿ ಸಿಬ್ಬಂದಿಗೆ ಸ್ಥಳೀಯರು ತಡೆ ಒಡ್ಡಿದರು. ಪರಿಣಾಮವಾಗಿ ಶಹೀನ್‌ ಬಾಗ್‌ ಮತ್ತು ಸುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. 

ಪ್ರತಿಭಟನಕಾರರು ಹಿಂದೆ ಸರಿಯಲು ಒಪ್ಪಲಿಲ್ಲ. ಅವರು ಎಸ್‌ಡಿಎಂಸಿ ಮತ್ತು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಕೆಲವು ಮಹಿಳೆಯರು ಬುಲ್ಡೋಜರ್‌ಗಳ ಮುಂದೆ ನಿಂತರು. ಹೀಗಾಗಿ, ಸಿಬ್ಬಂದಿಯು ತೆರವು ಕಾರ್ಯಾಚರಣೆ ನಡೆಸದೆಯೇ ಹಿಂದಿರುಗಬೇಕಾಯಿತು. 

ಪೌರತ್ವ ತಿದ್ದುಪ‍ಡಿ ಕಾಯ್ದೆ (ಸಿಎಎ) ವಿರೋಧಿಸಿ 2019ರ ಕೊನೆಯಿಂದ 2020ರ ಆರಂಭದ ವರೆಗೆ ನಡೆದ ವಿಶಿಷ್ಟ ಸ್ವರೂಪದ ಪ್ರತಿಭಟನೆಗೆ ಶಹೀನ್‌ಬಾಗ್‌ ಸಾಕ್ಷಿಯಾಗಿತ್ತು. ವಾಯವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ತೆರವು ಕಾರ್ಯಾಚರಣೆಯನ್ನು ಇತ್ತೀಚೆಗೆ ನಡೆಸಲಾಗಿತ್ತು. ಆದರೆ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. 

‘ಒತ್ತುವರಿ ತೆರವು ಯಾವುದೇ ಸ್ಥಳೀಯಾಡಳಿತ ಸಂಸ್ಥೆಯ ಅನಿವಾರ್ಯ ಕರ್ತವ್ಯ. ಪ್ರತಿಭಟನೆಯು ರಾಜಕೀಯ ಪ್ರೇರಿತ. ಒತ್ತುವರಿ ತೆರವಿಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಎಸ್‌ಡಿಎಂಸಿ ಕೇಂದ್ರ ವಲಯದ ಅಧ್ಯಕ್ಷ ರಾಜ್‌ಪಾಲ್‌ ಸಿಂಗ್‌ ಹೇಳಿದ್ದಾರೆ. 

‘ರೋಹಿಂಗ್ಯಾ ಸಮುದಾಯದವರು, ಬಾಂಗ್ಲಾದೇಶೀಯರು ಮತ್ತು ಸಮಾಜವಿರೋಧಿ ಶಕ್ತಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ತೆರವು ಮಾಡಬೇಕು’ ಎಂದು ದಕ್ಷಿಣ ಮತ್ತು ಪೂರ್ವ ದೆಹಲಿಯ ಮೇಯರ್‌ಗಳಿಗೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್‌ ಗುಪ್ತಾ ಅವರು ಪತ್ರ ಬರೆದ ಬಳಿಕ ತೆರವು ಕಾರ್ಯಾಚರಣೆಗಳಿಗೆ ಚಾಲನೆ ಕೊಡಲಾಗಿದೆ. 

ಓಖ್ಲಾ ಮತ್ತು ಜಸೋಲಾಗಳಲ್ಲಿಯೂ ತೆರವು ಕಾರ್ಯಾಚರಣೆ ನಡೆಸಲು ಎಸ್‌ಡಿಎಂಸಿ ಉದ್ದೇಶಿಸಿತ್ತು. ಆದರೆ, ಪೊಲೀಸ್‌ ಸಿಬ್ಬಂದಿ ಲಭ್ಯರಿಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ. ನ್ಯೂ ಫ್ರೆಂಡ್ಸ್‌ ಕಾಲೊನಿಯಲ್ಲಿ ಮಂಗಳವಾರ, ಮೆಹರ್‌ಚಂದ್‌ ಮಾರ್ಕೆಟ್‌ನಲ್ಲಿ ಬುಧವಾರ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಎಸ್‌ಡಿಎಂಸಿ ಘೋಷಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು