ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಯಾನ ಸಚಿವಾಲಯದ ಮರುನಾಮಕರಣ: ಪ್ರಧಾನಿ ನರೇಂದ್ರ ಮೋದಿ

Last Updated 8 ನವೆಂಬರ್ 2020, 9:51 IST
ಅಕ್ಷರ ಗಾತ್ರ

ಅಹಮದಾಬಾದ್: ನೌಕಾಯಾನ ಸಚಿವಾಲಯವನ್ನು ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಿಳಿಸಿದರು.

ಸೂರತ್‌ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ ಮಾರ್ಗ ಕಲ್ಪಿಸುವ ರೋ–ಪ್ಯಾಕ್ಸ್‌ ಹಡಗು ಸೇವೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

‘ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿಸುವಲ್ಲಿ ಸಮುದ್ರ ಪ್ರದೇಶಗಳು ಕೂಡ ಮಹತ್ವದ ಪಾತ್ರವಹಿಸಲಿದೆ. ಅದಕ್ಕಾಗಿ ಬೇಕಾಗಿರುವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಡಲಾಗುತ್ತಿದ್ದು ನೌಕಾಯಾನ ಸಚಿವಾಲಯವನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ’ ಎಂದರು.

‘ಈ ಸಚಿವಾಲಯವನ್ನು ವಿಸ್ತರಿಸಲಾಗುತ್ತಿದೆ. ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೌಕಾಯಾನ ಸಚಿವಾಲಯವು ಬಂದರು ಮತ್ತು ಜಲಮಾರ್ಗಗಳ ಬಗ್ಗೆಯೂ ಕಾಳಜಿ ವಹಿಸುತ್ತದೆ. ಭಾರತದಲ್ಲೂ ನೌಕಾಯಾನ ಸಚಿವಾಲಯವು ಬಂದರು ಮತ್ತು ಜಲಮಾರ್ಗ ಸಂಬಂಧಿತ ಹೆಚ್ಚಿನ ಕೆಲಸಗಳನ್ನು ಮಾಡುತ್ತದೆ. ಹಾಗಾಗಿ ಹೆಸರಿನಲ್ಲಿ ಸ್ಪಷ್ಟತೆ ಇದ್ದರೆ, ಕೆಲಸದಲ್ಲೂ ಸ್ಪಷ್ಟತೆ ಇರುತ್ತದೆ’ ಎಂದು ಅವರು ತಿಳಿಸಿದರು.

ಅಪಘಾತ ಸಂಭವಿಸುವ ಸಾಧ್ಯತೆ: ಗುಜರಾತ್‌ನ ಭಾವನಗರದ ಸಾರಿಗೆ ವ್ಯವಹಾರ ನಡೆಸುವ ಮಾಲೀಕರೊಬ್ಬರು ತಮ್ಮ ಆರು ಲಾರಿಗಳಿಗೆ 8 ಚಾಲಕರನ್ನು ನೇಮಿಸಿರುವ ಬಗ್ಗೆ ಮೋದಿ ಆಕ್ಷೇಪ ವ್ಯಕ್ತಪಡಿಸಿದರು.

ರೋ–ಪ್ಯಾಕ್ಸ್‌ ಸಂವಾದ ಕಾರ್ಯಕ್ರಮದಲ್ಲಿ ಆಸೀಫ್‌ ಸೋಲಂಕಿ ಎಂಬುವರು ತಮ್ಮ ಬಳಿ ಆರು ಲಾರಿಗಳಿವೆ ಮತ್ತು ಎಂಟು ಚಾಲಕರಿದ್ದಾರೆ ಎಂದರು. ಇದಕ್ಕೆ ಮೋದಿ, ‘ಆರು ಟ್ರಕ್‌ಗಳಿಗೆ 12 ಚಾಲಕರಿರಬೇಕು. ನೀವು ಚಾಲಕರಿಂದ ಅತಿಯಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಇದು ಸರಿಯಲ್ಲ ಎಂದರು.

‘ಚಾಲಕ ಅತಿಯಾಗಿ ಕೆಲಸ ಮಾಡಿದಾಗ ಸುಸ್ತಾಗಿ ವಾಹನ ಚಲಾಯಿಸುತ್ತಿರುವಾಗಲೇ ನಿದ್ದೆಗೆ ಜಾರುತ್ತಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ನೀವು ಈ ವಹಿವಾಟಿನಲ್ಲಿ ಸಂಪಾದಿಸಿದ ಹಣ ಅಪಘಾತದ ವೆಚ್ಚ ಭರಿಸುವಲ್ಲಿ ಹೋಗುತ್ತದೆ’ ಎಂದು ಹೇಳಿ ಹೆಚ್ಚು ಚಾಲಕರನ್ನು ನೇಮಿಸಿಕೊಳ್ಳುವ ಬಗ್ಗೆ ಆಸಿಫ್‌ ಅವರಿಂದ ಆಶ್ವಾಸನೆ ಪಡೆದರು.

‘ಇನ್ನೂ ಲಾರಿಗಳನ್ನು ಖರೀಸುವ ಯೋಚನೆ ಇದೆಯಾ ಎಂಬ ಮೋದಿ ಅವರ ಪ್ರಶ್ನೆಗೆ ಆಸಿಫ್‌ ನಸುನಕ್ಕು ಸುಮ್ಮನಾದರು. ಆಗ ಮೋದಿ ಅವರು, ಹೆಚ್ಚು ಲಾರಿಗಳನ್ನು ಖರೀದಿಸುವ ನಿಮ್ಮ ಯೋಜನೆಯನ್ನು ಬಹಿರಂಗಪಡಿಸಿದರೆ ಆದಾಯ ತೆರಿಗೆ ಇಲಾಖೆಯವರೇನೂನಿಮ್ಮ ಮನೆಗೆ ದಾಳಿ ಇಡುವುದಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT