ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಎಸ್, ಕೆಸಿಆರ್‌ಗೆ ಪ್ರಬಲ ಸಂದೇಶ: ಹೈದರಾಬಾದ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ

Last Updated 2 ಜುಲೈ 2022, 5:54 IST
ಅಕ್ಷರ ಗಾತ್ರ

ಹೈದರಾಬಾದ್: 18 ವರ್ಷಗಳ ಬಳಿಕ ಹೈದರಾಬಾದ್‌ನಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ.

ಈ ವರ್ಷ ಎರಡು ಬಾರಿ ತೆಲಂಗಾಣಕ್ಕೆ ಭೇಟಿ ನೀಡಿದ್ದಾಗಲೂ ಪ್ರಧಾನಿ ಮೋದಿಯವರನ್ನು ಟಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬರಮಾಡಿಕೊಂಡಿರಲಿಲ್ಲ. ಈ ನಡುವೆಯೇ ಈ ವರ್ಷ ಮೂರನೇ ಬಾರಿಗೆ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿಯೂ ಕೆಸಿಆರ್‌, ಮೋದಿಯವರನ್ನು ಬರಮಾಡಿಕೊಳ್ಳುತ್ತಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿರುವ ರಾವ್ ಅವರು, ಫೆಬ್ರುವರಿ ಮತ್ತು ಮೇ ತಿಂಗಳಲ್ಲಿ ಪ್ರಧಾನಿ ಅವರು ನಗರಕ್ಕೆ ಭೇಟಿ ನೀಡಿದ್ದಾಗ ಅವರನ್ನು ಭೇಟಿಯಾಗದೆ ಬೇರೆಡೆ ತೆರಳಿದ್ದರು.

ತೆಲಂಗಾಣ ರಾಜಧಾನಿಯನ್ನು ಈಗ ಎನ್‌ಇಸಿ( ರಾಷ್ಟ್ರೀಯ ಕಾರ್ಯಕಾರಿಣಿ)ಗಾಗಿ ಆಯ್ಕೆ ಮಾಡಿರುವುದು ಕೆಸಿಆರ್ ಮತ್ತು ಅವರ ಪಕ್ಷಕ್ಕೆ ಬಲವಾದ ಸಂದೇಶವನ್ನು ರವಾನಿಸುವುದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 2023 ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಸಭೆಯು ರಾಜ್ಯದಲ್ಲಿನ ದೊಡ್ಡ ಚುನಾವಣಾ ವಿರೋಧಿಯನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ನಾಯಕರು ನಂಬಿದ್ದಾರೆ.

ಟಿಆರ್‌ಎಸ್ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ ಮತ್ತು ಕೆಸಿಆರ್ ಕುಟುಂಬವನ್ನು ಸಂತೋಷವಾಗಿಟ್ಟುಕೊಳ್ಳಲಾಗಿದ್ದು, ತೆಲಂಗಾಣದ ಜನರನ್ನು ಅತೃಪ್ತರನ್ನಾಗಿಟ್ಟುಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ನಡುವೆ, ಬಿಜೆಪಿ ಕಳೆದ ಎರಡು ದಿನಗಳಿಂದ ಕೇಂದ್ರ ಸಚಿವರು, ಮಾಜಿ ಸಿಎಂಗಳು ಸೇರಿದಂತೆ ಇತರ ರಾಜ್ಯಗಳ 119 ಬಿಜೆಪಿ ನಾಯಕರನ್ನು ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಿಗೆ ಕಳುಹಿಸಿದೆ. ಉದಾಹರಣೆಗೆ, ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ದೇವ್ ಅವರು ತೆಲಂಗಾಣದ ಉತ್ತರ ಭಾಗದಲ್ಲಿರುವ ಆದಿಲಾಬಾದ್‌ಗೆ ಭೇಟಿ ನೀಡಿದ್ದರು. ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ದಕ್ಷಿಣ ತೆಲಂಗಾಣ ಕ್ಷೇತ್ರವಾದ ಜಡ್ಚೆರ್ಲಾದಲ್ಲಿ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ನಿಜಾಮಾಬಾದ್‌ಗೆ ಹೋಗಿದ್ದರು.

‘ತೆಲಂಗಾಣದಲ್ಲಿ ಪಕ್ಷದ ಸ್ಥಾನವನ್ನು ನಿರ್ಣಯಿಸುವುದು ಮತ್ತು ಅದರ ಉತ್ತಮ ಚಟುವಟಿಕೆಗಳು ಹಾಗೂ ಉದ್ದೇಶಗಳನ್ನು ಜನರ ಬಳಿಗೆ ಹೆಚ್ಚು ಕೊಂಡೊಯ್ಯುವುದು ಸಭೆಯ ಉದ್ದೇಶವಾಗಿದೆ. ಬಿಜೆಪಿಯು ತೆಲಂಗಾಣ ರಾಜ್ಯದಲ್ಲಿ ಕಾಣುವುದಕ್ಕಿಂತ ದೊಡ್ಡದಾಗಿದೆ ಎಂಬ ಸಂದೇಶ ರವಾನೆಯಾಗುತ್ತಿದೆ. ಇದು ಕಾರ್ಯಕರ್ತರಲ್ಲಿ ಮತ್ತು ಮತದಾರರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಎಂದು ಟಿಬಿಜೆಪಿ(ತೆಗಾಣ ಬಿಜೆಪಿ) ವಕ್ತಾರ ಕಿಶೋರ್ ಪೋರೆಡ್ಡಿ’ ತಿಳಿಸಿದ್ದಾರೆ.

ದೀರ್ಘಾವಧಿಯ ನಂತರ ದಕ್ಷಿಣ ಭಾರತದ ನಗರದ ಆಯ್ಕೆಯು ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣದ ರಾಜ್ಯಗಳಲ್ಲಿ ನೆಲೆ ವಿಸ್ತರಿಸುವ ಪಕ್ಷದ ತಂತ್ರಕ್ಕೆ ಅನುಗುಣವಾಗಿದೆ.

ಹೈದರಾಬಾದ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು(ಜುಲೈ 02) ಆರಂಭವಾಗಲಿರುವ ಎರಡು ದಿನಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಬಿಜೆಪಿ ಆಡಳಿತವಿರುವ 18 ರಾಜ್ಯಗಳ ಸಿಎಂಗಳು ಸೇರಿ 300ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿರುವ ರಾಷ್ಟ್ರೀಯ ನಾಯಕರಿಗೆ ತೆಲಂಗಾಣ ಪಾಕಪದ್ಧತಿಯ ನೈಜ, ಹಳ್ಳಿಗಾಡಿನ ರುಚಿಯನ್ನು ನೀಡಲು ಗ್ರಾಮೀಣ ತೆಲಂಗಾಣದ ಮಹಿಳೆಯರು ಸೇರಿದಂತೆ ಪ್ರಸಿದ್ಧ ಅಡುಗೆ ತಯಾರಕರನ್ನು ತೊಡಗಿಸಿಕೊಂಡಿದೆ.

ಎನ್‌ಇಸಿ ಮುಗಿದ ನಂತರ ಭಾನುವಾರ ಸಂಜೆ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ರ್‍ಯಾಲಿ‘ವಿಜಯ ಸಂಕಲ್ಪ ಸಭೆ’ಗೆ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಭಾಷಣಕ್ಕೆ ಸುಮಾರು 10 ಲಕ್ಷ ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಟಿಬಿಜೆಪಿ ನಾಯಕರು ಹೊಂದಿದ್ದಾರೆ.

2004ರ ಜನವರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮತ್ತು ವೆಂಕಯ್ಯ ನಾಯ್ಡು ಪಕ್ಷದ ಅಧ್ಯಕ್ಷರಾಗಿದ್ದಾಗ ಕೊನೆಯ ಬಾರಿಗೆ ಮುತ್ತಿನ ನಗರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು.

ಅಂದಿನ ಬಿಜೆಪಿಯ ಹಿರಿಯ ನಾಯಕರು ‘ಇಂಡಿಯಾ ಶೈನಿಂಗ್’ಎಂಬ ಘೋಷವಾಕ್ಯವನ್ನು ಇಟ್ಟುಕೊಂಡು ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲು ನಿರ್ಧರಿಸಿದ್ದರು. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ ಸೋತು ಮತ್ತೆ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿತ್ತು. ಬಳಿಕ, 10 ವರ್ಷಗಳ ಕಾಲ ಯುಪಿಎ ಸರ್ಕಾರ ಆಡಳಿತ ನಡೆಸಿತ್ತು.

ಬಿಜೆಪಿ ಹೆಚ್ಚು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವ ಪ್ರಸ್ತುತ ಸನ್ನಿವೇಶದಲ್ಲಿ ಈ ಸಭೆ ನಡೆಯುತ್ತಿದೆ. ಬಿಜೆಪಿಯು ಲೋಕಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದ್ದು, ಹಲವಾರು ದೊಡ್ಡ ಮತ್ತು ಸಣ್ಣ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ನೆರೆಯ ಮಹಾರಾಷ್ಟ್ರದಲ್ಲಿಯೂ ಸರ್ಕಾರದ ಪಾಲುದಾರ ಪಕ್ಷವಾಗಿರುವುದು ತೃಪ್ತಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT