ಭಾನುವಾರ, ಮೇ 29, 2022
22 °C
ವರದಿ ಹಾನಿಕಾರಕವಾಗಿರಬಾರದು, ತಪ್ಪಾಗಿರಬಾರದು. ವಾಸ್ತವ ಸ್ವರೂಪದ್ದಾಗಿರಬೇಕು: ಮಾಧ್ಯಮಗಳಿಗೆ ಕೋರ್ಟ್‌ ನೀತಿಪಾಠ

ದಿಶಾ ಪ್ರಕರಣ ಕುರಿತ ಕೆಲ ಮಾಧ್ಯಮಗಳ ವರದಿ ವೈಭವೀಕೃತ, ಪೂರ್ವಾಗ್ರಹಪೀಡಿತ: ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ:' ರೈತ ಹೋರಾಟವನ್ನು ಬೆಂಬಲಿಸುವ ಟೂಲ್‌ಕಿಟ್‌ ಪ್ರಕರಣದಲ್ಲಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ವಿರುದ್ಧದ ಎಫ್‌ಐಆರ್‌ ಕುರಿತ ಕೆಲವು ಮಾಧ್ಯಮಗಳ ವರದಿಯು ವೈಭವೀಕೃತ ಮತ್ತು ಪೂರ್ವಾಗ್ರಹಪೀಡಿತ,' ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ. ಆದರೆ, ಅಂಥ ಅಂಶಗಳನ್ನು ಅಳಿಸಿಹಾಕುವ ಯಾವುದೇ ಆದೇಶವನ್ನು ಈ ಹಂತದಲ್ಲಿ ನೀಡಲು ಕೋರ್ಟ್‌ ನಿರಾಕರಿಸಿದೆ.

'ಮಾಧ್ಯಮಗಳ ಇತ್ತೀಚಿನ ವರದಿಗಳನ್ನು ಗಮನಿಸಿದರೆ ಅದು ವೈಭವೀಕರಣಗೊಂಡದ್ದು ಎಂಬುದು ಖಚಿತವಾಗಿಯೂ ತೋರುತ್ತದೆ' ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದರು. ಈಗಾಗಲೇ ಸಾರ್ವಜನಿಕಗೊಂಡಿರುವ ಅಂಥ ವಿಷಯಗಳನ್ನು ಅಳಿಸಿ ಹಾಕುವುದನ್ನು ನಂತರದ ಹಂತದಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಹೇಳಿದರು.

ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸಗೆ ಸೂಚಿಸುವಂತೆ ರವಿ ಮಾಡಿದ ಮನವಿಯನ್ನು ಹೈಕೋರ್ಟ್ ಶುಕ್ರವಾರ ಆಲಿಸಿತು.

ತನ್ನ ಮತ್ತು ಮೂರನೇ ವ್ಯಕ್ತಿಗಳ ನಡುವೆ ನಡೆದಿರುವ ವಾಟ್ಸಾಪ್ ಮಾತುಕತೆ ಸೇರಿದಂತೆ ಯಾವುದೇ ಖಾಸಗಿ ಸಂವಹನವನ್ನು ಅಥವಾ ವಿಷಯವನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಡೆಯುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋರಿಕೆಯಾದ ಮಾಹಿತಿಯನ್ನು ಪ್ರಸಾರ ಮಾಡದಂತೆ ಹೈಕೋರ್ಟ್‌ ಮಾಧ್ಯಮ ಸಂಸ್ಥೆಗಳಿಗೆ ತಾಕೀತು ಮಾಡಿತು. ಅಂಥ ವರದಿಗಳು ತನಿಖೆಯ ದಿಕ್ಕುತಪ್ಪಿಸುತ್ತವೆ ಎಂದೂ ಅದು ಹೇಳಿತು. ಮತ್ತೊಂದೆಡೆ, ತನಿಖಾ ಮಾಹಿತಿ ಸೋರಿಕೆ ಮಾಡಿಲ್ಲ, ಸೋರಿಕೆ ಮಾಡಲು ಉದ್ದೇಶಿಸಿಲ್ಲ ಎಂಬ ಅಫಿಡವಿಟ್‌ಗೆ ಬದ್ಧವಾಗಿರುವಂತೆ ದೆಹಲಿ ಪೊಲೀಸರಿಗೆ ಕೋರ್ಟ್‌ ಸೂಚನೆ ನೀಡಿತು.

'ಪತ್ರಕರ್ತರ ಸುದ್ದಿ ಮೂಲವನ್ನು ಕೇಳಲು ಸಾಧ್ಯವಿಲ್ಲವಾದರೂ, ಆತ/ಆಕೆ ತನ್ನ ಸುದ್ದಿ ಮೂಲ ಅಧಿಕೃತವೇ, ಪರಿಶೀಲನೆಗೊಂಡದ್ದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರಸಾರವಾಗುವ ವರದಿಗಳು ಕೇವಲ ಊಹೆ ಅಥವಾ ಕಲ್ಪನೆಯಾಗಿರಬಾರದು,' ಎಂದು ನ್ಯಾಯಮೂರ್ತಿ ಸಿಂಗ್‌ ಸ್ಪಷ್ಟವಾಗಿ ತಿಳಿಸಿದರು.

'ವರದಿಯ ವಿಷಯವು ಹಾನಿಕಾರಕವಾಗಿರಬಾರದು, ತಪ್ಪಾಗಿರಬಾರದು. ಸಾಧ್ಯವಾದಷ್ಟು ಮಟ್ಟಿಗೆ ವಾಸ್ತವ ಸ್ವರೂಪದ್ದಾಗಿರಬೇಕು,' ಎಂದು ಕೋರ್ಟ್‌ ಮಾಧ್ಯಮಗಳಿಗೆ ನೀತಿಪಾಠ ಹೇಳಿತು.

'ಪೊಲೀಸರ ವಿವರಣೆ, ಕೋರ್ಟ್‌ನ ವಿಚಾರಣೆಗಳನ್ನು ಮಾಧ್ಯಮಗಳು ವರದಿ ಮಾಡಬಹುದು. ಆದರೆ, ಸೋರಿಕೆಯಾದ ಮಾಹಿತಿಯು ತನಿಖೆಗೆ ಪೂರ್ವಗ್ರಹವಾಗುವುದರಿಂದ ಅವುಗಳನ್ನು ಪ್ರಸಾರ ಮಾಡಬಾರದು,' ಎಂದು ಕೋರ್ಟ್‌ ತಿಳಿಸಿತು.

'ಗೃಹ ಇಲಾಖೆಯ ನಿಯಮಗಳಿಗೆ ಒಳಪಟ್ಟು ಪೊಲೀಸ್‌ ಇಲಾಖೆ ಖುದ್ದು ಮಾಧ್ಯಮಗಳಿಗೆ ಸುದ್ದಿಗೋಷ್ಠಿಯ ಮೂಲಕ ಮಾಹಿತಿ ನೀಡಬಹುದು. ಮಾಧ್ಯಮಗಳು 'ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮ 1994' ರಲ್ಲಿರುವಂತೆ 'ಪ್ರೋಗ್ರಾಂ ಕೋಡ್'ಗೆ ಬದ್ಧವಾಗಿರಬೇಕು. 'ನ್ಯೂಸ್ ಬ್ರಾಡ್ಕಾಸ್ಟರ್ಸ್‌ ಅಸೋಸಿಯೇಷನ್' ಸೂಚಿಸಿರುವ ನೈತಿಕತೆ ಮತ್ತು ಪ್ರಸಾರ ಮಾನದಂಡಗಳ ಸಂಹಿತೆಯನ್ನು ಪಾಲಿಸಬೇಕು,' ಎಂದು ಕಟ್ಟುನಿಟ್ಟಾಗಿ ಹೇಳಿತು.

ಇದಕ್ಕೂ ಹಿಂದೆ, ದಿಶಾ ರವಿ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೆಹಲಿ ನ್ಯಾಯಾಲಯ ಆದೇಶಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು