ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವು ರಾಜ್ಯಗಳಲ್ಲಿ ಲಸಿಕೆ ಅಭಾವ: ಬರಿದಾಗುತ್ತಿದೆ ದಾಸ್ತಾನು, ತಾರತಮ್ಯ ಆರೋಪ

Last Updated 10 ಏಪ್ರಿಲ್ 2021, 19:54 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಹೊಡೆತ ಬಿರುಸಾಗಿದೆ. ಆದರೆ ಲಸಿಕೆ ಅಭಿಯಾನಕ್ಕೆ ಅಡ್ಡಿ ಎದುರಾಗಿದೆ. ಪಂಜಾಬ್, ಮಹಾರಾಷ್ಟ್ರ, ಛತ್ತೀಸಗಡ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್‌ ತಡೆ ಲಸಿಕೆ ಕೊರತೆ ಎದುರಾಗಿರುವುದು ಆತಂಕ ಮೂಡಿಸಿದೆ.

ಬೃಹತ್ ಲಸಿಕಾ ಅಭಿಯಾನ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರವು ಕೋವಿಡ್ ವಿರುದ್ಧ ಹೋರಾಟಕ್ಕೆ ಪಣ ತೊಟ್ಟಿದೆ. ಆದರೆ ರಾಜ್ಯಗಳಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಈ ಹೋರಾಟಕ್ಕೆ ಹಿನ್ನಡೆ ತಂದಿದೆ.

ಪಂಜಾಬ್‌ನಲ್ಲಿ ಐದು ದಿನಗಳಲ್ಲಿ ಹಾಗೂ ಛತ್ತೀಸಗಡದಲ್ಲಿ ಮೂರು ದಿನಗಳಲ್ಲಿ ಲಸಿಕೆ ದಾಸ್ತಾನು ಖಾಲಿಯಾಗುತ್ತದೆ ಎಂದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯಗಳಿಗೆ ಲಸಿಕೆ ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಕೇಂದ್ರ ಸರ್ಕಾರವು ಬಿಜೆಪಿಯೇತರ ಸರ್ಕಾರಗಳನ್ನು ತಾರತಮ್ಯದ ದೃಷ್ಟಿಯಲ್ಲಿ ನೋಡಬಾರದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರ ಸಭೆಯಲ್ಲೂ ಲಸಿಕೆಯ ಕೊರತೆಯ ವಿಚಾರ ಪ್ರಸ್ತಾಪವಾಯಿತು.‘ಭಾರತದ ಲಸಿಕಾ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು. ಉಚಿತವಾಗಿ ಅಥವಾ ಉಡುಗೊರೆ ರೂಪದಲ್ಲಿ ಇತರ ದೇಶಗಳಿಗೆ ನೀಡುವುದು ನಂತರದ ಕೆಲಸ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ರಫ್ತು ಮಾಡಿದ್ದರಿಂದ ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಎದುರಾಗಿದೆ. ರಾಜ್ಯಗಳಲ್ಲಿ ಲಸಿಕೆ ಕೊರತೆ ಇದ್ದರೂ ಸರ್ಕಾರವು ಲಸಿಕೆ ರಫ್ತು ಮಾಡುವುದು ಸರಿಯಲ್ಲ ಎಂದರು.

ಸಭೆಯಲ್ಲಿ ಭಾಗಿಯಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ತಮ್ಮ ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿರುವ ಬಗ್ಗೆ ಪ್ರಸ್ತಾಪಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಎಡವಿದ ಸರ್ಕಾರ: ಸೋನಿಯಾ
ಕೇಂದ್ರ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಎಡವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರ ಜೊತೆ ವರ್ಚ್ಯುವಲ್ ಸಭೆಯಲ್ಲಿ ಅವರು ಮಾತನಾಡಿದರು. ಈ ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸೋಂಕಿತರ ಪರೀಕ್ಷೆ, ಪತ್ತೆ ಹಾಗೂ ಲಸಿಕೆ ನೀಡುವಿಕೆಗೆ ಆದ್ಯತೆ ನೀಡಬೇಕು ಎಂದರು.

ಕೋವಿಡ್ ಪ್ರಸರಣ ಹೆಚ್ಚುತ್ತಿರುವ ಕಾರಣ ಚುನಾವಣಾ ರ‍್ಯಾಲಿಗಳೂ ಸೇರಿದಂತೆ ಎಲ್ಲ ಸಾರ್ವಜನಿಕ ಸಮಾರಂಭಗಳನ್ನು ನಿರ್ಬಂಧಿಸಬೇಕು ಎಂದು ಸೋನಿಯಾ ಗಾಂಧಿ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟರು.

‘ಚುನಾವಣಾ ರ‍್ಯಾಲಿಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್ ಪ್ರಸರಣಕ್ಕೆ ವೇಗ ನೀಡಿವೆ. ನಾವೆಲ್ಲರೂ ಜವಾಬ್ದಾರರು. ರಾಷ್ಟ್ರದ ಹಿತಾಸಕ್ತಿ ನಮ್ಮೆಲ್ಲರ ಆದ್ಯತೆಯಾಗಿರಬೇಕು ಎಂದು ಸೋನಿಯಾ ಹೇಳಿದರು.

ಪ್ರಕರಣಗಳು ಏರುಗತಿಯಲ್ಲಿರುವಾಗ ಪ್ರಮುಖ ಪ್ರತಿಪಕ್ಷವಾಗಿ ದನಿ ಎತ್ತುವುದು ಕಾಂಗ್ರೆಸ್‌ನ ಕರ್ತವ್ಯ. ಜನರ ಪರವಾಗಿ ಕೆಲಸ ಮಾಡುವಂತೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ’ ಎಂದು ಸೋನಿಯಾ ಹೇಳಿದರು.

ಸಾಂಕ್ರಾಮಿಕ ರೋಗವು ನಿಯಂತ್ರಣ ತಪ್ಪಿ ದೊಡ್ಡ ಅನಾಹುತ ಸೃಷ್ಟಿಸದಂತೆ ತಡೆಯಲು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

ರೈತರ ಸಿಟ್ಟು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ರೈತರು ಆಕ್ರೋಶಗೊಂಡಿದ್ದು, ಲಸಿಕಾ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ‘ಕೃಷಿ ಕಾಯ್ದೆಗಳ ಬಗ್ಗೆ ಜನರಿಗೆ ಸಿಟ್ಟು ಇರುವ ಕಾರಣ ಅವರು ಲಸಿಕಾ ಕೇಂದ್ರಗಳಿಗೆ ಬರುತ್ತಿಲ್ಲ. ಆದಾಗ್ಯೂ ಇವರೆಗೆ 16 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ’ ಎಂದರು.

‘ಮಾನದಂಡ ರೂಪಿಸಿ’: ಮನವಿ
ಮುಂಬೈ: ಲಸಿಕೆ ಹಂಚಿಕೆಗೆ ಮಾನದಂಡ ಆಧರಿಸಿದ ನೀತಿ ರೂಪಿಸಿ ಎಂದು ಮಹಾರಾಷ್ಟ್ರ ಒತ್ತಾಯಿಸಿದೆ. ರಾಜ್ಯಗಳ ಜನಸಂಖ್ಯೆ ಮತ್ತು ಕೋವಿಡ್ ಸಕ್ರಿಯ ಪ್ರಕರಗಳನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಹಂಚಿಕೆ ಮಾಡಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರು ರಾಜ್ಯಗಳು ಹೆಚ್ಚಿನ ಪ್ರಮಾಣದ ಲಸಿಕೆ ಪಡೆದುಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ಇತ್ತೀಚೆಗೆ ಪೂರೈಸಿದ 3.5 ಕೋಟಿ ಲಸಿಕೆ ಡೋಸ್‌ ಪೈಕಿ ಮಹಾರಾಷ್ಟ್ರಕ್ಕೆ ಸಿಕ್ಕಿರುವುದು ಕೇವಲ 7 ಲಕ್ಷ ಡೋಸ್ ಎಂದು ಅವರು ಹೇಳಿದ್ದಾರೆ. ಆದರೆ ಕೇಂದ್ರದ ಮನವೊಲಿಸಿದ ಬಳಿಕ ಹೆಚ್ಚುವರಿಯಾಗಿ 10 ಲಕ್ಷ ಡೋಸ್ ಪೂರೈಕೆಯಾಯಿತು ಎಂದಿದ್ದಾರೆ.

1.10 ಕೋಟಿ ಡೋಸ್: ಮಹಾರಾಷ್ಟ್ರಕ್ಕೆ ಈವರೆಗೆ 1.10 ಕೋಟಿ ಡೋಸ್ ಲಸಿಕೆ ಪೂರೈಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ರಾಜ್ಯವು ಲಸಿಕೆ ಕೊರತೆ ಎದುರಿಸುತ್ತಿದೆ ಎಂಬ ವರದಿಗಳಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ರಾಜ್ಯಗಳು ಒಂದು ಕೋಟಿಗೂ ಹೆಚ್ಚು ಡೋಸ್ ಲಸಿಕೆ ಪಡೆದುಕೊಂಡಿವೆ ಎಂದಿದ್ದಾರೆ. ಮಹಾರಾಷ್ಟ್ರಕ್ಕೆ1,100 ವೆಂಟಿಲೇಟರ್‌ಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಬಡವರ ಕೈಗೆ ದುಡ್ಡುಕೊಡಿ: ರಾಹುಲ್
ಕೋವಿಡ್ ಎರಡನೇ ಅಲೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದರು. ಎರಡನೇ ಅಲೆಗೆ ಕಾರಣವಾಗಿರುವ ಹೊಸ ರೂಪಾಂತರ ತಳಿಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು ಸಲಹೆ ನೀಡಿದರು.

‘ಸೋಂಕು ಹರಡುವಿಕೆಗೂ ಮತ್ತು ಪೌಷ್ಟಿಕತೆ, ಜೀವನೋಪಾಯದ ನಡುವೆ ನೇರ ಸಂಪರ್ಕವಿದೆ. ಸೋಂಕು ಬಡವರ ಮೇಲೆ ದಾಳಿ ಮಾಡಿ ಅವರಿಗೆ ಇನ್ನಷ್ಟು ಕಷ್ಟ ತಂದಿಡುತ್ತದೆ. ಹೀಗಾಗಿ ಸರ್ಕಾರವು ಕನಿಷ್ಠ ಆದಾಯದ ಖಾತರಿ ನೀಡಬೇಕು. ಸಂಕಷ್ಟದ ಸಮಯದಲ್ಲಿ ಬಡವರ ಕೈಗೆ ಹಣ ಕೊಡಬೇಕು’ ಎಂದು ರಾಹುಲ್ ಹೇಳಿದರು.

ದೇಶದ ಜನರಿಗೆ ಉದ್ಯೋಗ ಮತ್ತು ಲಸಿಕೆ ಬೇಕೇ ಹೊರತು ಬಿಜೆಪಿ ಸರ್ಕಾರದ ಸುಳ್ಳುಗಳು ಅಲ್ಲ’ ಎಂದಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಉಚಿತ ರೆಮ್‌ಡೆಸಿವಿರ್ ಹಂಚಿಕೆ
ಅಹಮದಾಬಾದ್:
ಗುಜರಾತ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಮಧ್ಯೆಯೇ ಹೊಸ ವಿವಾದವೊಂದು ಶನಿವಾರ ಸ್ಫೋಟಗೊಂಡಿದೆ. ಸೂರತ್‌ನ ಬಿಜೆಪಿ ಕಚೇರಿಯಲ್ಲಿ ಭಾರಿ ಬೇಡಿಕೆಯಿರುವ ಆ್ಯಂಟಿ ವೈರಲ್ ಇಂಜೆಕ್ಷನ್ ರೆಮೆಡೆಸಿವಿರ್ ವಿತರಣೆ ಮಾಡಲಾಗುತ್ತಿದೆ.

ಕೋವಿಡ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಹೆಚ್ಚು ಕೋವಿಡ್ ಬಾಧಿತರು ಕಂಡುಬಂದಿರುವ ಸೂರತ್‌ನಲ್ಲಿ ಸುಮಾರು 5 ಸಾವಿರ ಇಂಜೆಕ್ಷನ್ ವಿತರಿಸಲು ಪಕ್ಷ ನಿರ್ಧರಿಸಿದೆ. ಕಚೇರಿ ಮುಂದೆ ಜನರು ಸಾಲುಗಟ್ಟಿ ಇಂಜೆಕ್ಷನ್ ಪಡೆದುಕೊಂಡರು.

ರಾಜಕೀಯ ಪಕ್ಷವೊಂದು ಈ ಇಂಜೆಕ್ಷನ್‌ಗಳನ್ನು ಪಡೆದುಕೊಂಡಿದ್ದು ಹೇಗೆ ಎಂಬ ಬಗ್ಗೆ ಹಲವರು ಆಕ್ಷೇಪ ಎತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT