ಶನಿವಾರ, ಅಕ್ಟೋಬರ್ 1, 2022
23 °C

ಕಾಂಗ್ರೆಸ್‌ ಸೇರುವ ಸುದ್ದಿ ಸುಳ್ಳು: ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಕಾಂಗ್ರೆಸ್ ಸೇರುವ ವದಂತಿಗಳನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಶುಕ್ರವಾರ ನಿರಾಕರಿಸಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಅವರು ತಿಳಿಸಿದ್ದಾರೆ.

ಶಿವಪಾಲ್‌ ಸಿಂಗ್‌ ಯಾದವ್‌ ಅವರು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರ ತಮ್ಮ. ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಶಿವಪಾಲ್‌ ಸಿಂಗ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌ ಕೆಲ ತಿಂಗಳ ನಂತರ ಬೇರ್ಪಟ್ಟಿದ್ದರು.

ಕೃಷ್ಣ ಜನ್ಮಾಷ್ಟಮಿಯಂದು ಸಂದೇಶ ಹಂಚಿಕೊಂಡಿದ್ದ ಶಿವಪಾಲ್‌ ಯಾದವ್‌, ‘ಕಂಸನಂಥವರು ಸಮಾಜದಲ್ಲಿ ತಂದೆಯನ್ನೇ ಅವಮಾನಿಸಿ, ಮೋಸದಿಂದ ಗೆದ್ದಾಗ ಶ್ರೀ ಕೃಷ್ಣ ಖಂಡಿತವಾಗಿಯೂ ಅವತಾರವೆತ್ತಿ ಬಂದು ಧರ್ಮವನ್ನು ಸ್ಥಾಪಿಸುತ್ತಾನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.

ಶಿವಪಾಲ್‌ ಯಾದವ್‌ ಅವರ ಈ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಚಿಕ್ಕಪ್ಪ ಮತ್ತು ಮಗನ ನಡುವಿನ ಜಗಳಕ್ಕೆ ಸಂಬಂಧ ಕಲ್ಪಿಸಿದ್ದಾರೆ. ಆದರೆ ಶಿವಪಾಲ್ ಯಾದವ್ ಅವರು ತನ್ನ ಅಣ್ಣನ ಮಗನ ಹೆಸರನ್ನು ಎಲ್ಲಿಯೂ ಎತ್ತದೇ ಟೀಕೆ ಮಾಡಿದ್ದಾರೆ.

ಈ ಮಧ್ಯೆ, ಶಿವಪಾಲ್‌ ಯಾದವ್‌ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಉತ್ತರ ಪ್ರದೇಶದ ರಾಜಕೀಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಸ್ವತಃ ಶಿವಪಾಲ್‌ ಯಾದವ್‌ ಅವರೇ ಅದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಇದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದಾಗಿ ಶಿವಪಾಲ್‌ ಯಾದವ್‌ ಹೇಳಿದ್ದಾರೆ.

‘ಅಖಿಲೇಶ್‌ ಯಾದವ್‌ ಅವರ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೋಲು ಎದುರಾಯಿತು’ ಎಂದು ಶಿವಪಾಲ್‌ ಸಿಂಗ್‌ ಯಾದವ್‌ ಇತ್ತೀಚೆಗೆ ಟೀಕಿಸಿದ್ದರು. 

ಶಿವಪಾಲ್‌ ಯಾದವ್‌ ಅವರು ಬಿಜೆಪಿ ಸೇರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು. 

ಇವುಗಳನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು