ಶುಕ್ರವಾರ, ಜೂನ್ 25, 2021
21 °C
ಕೋವಿಡ್‌: ಕೇಂದ್ರ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ

ಜನರೊಂದಿಗೆ ಸಂಪರ್ಕದಲ್ಲಿದ್ದು, ಸಹಾಯ ಮಾಡಿ: ಪ್ರಧಾನಿ ನರೇಂದ್ರ ಮೋದಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19 ಬಿಕ್ಕಟ್ಟಿನ ಮಧ್ಯೆ ಆಯಾ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸಹಾಯ ಮಾಡಬೇಕು ಮತ್ತು ಪರಿಸ್ಥಿತಿಯ ಕುರಿತು ಜನರಿಂದ ಪ್ರತಿಕ್ರಿಯೆ ಪಡೆಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇಂದ್ರ ಸಚಿವರಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌–19 ಎರಡನೇ ಅಲೆಯಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ನಡೆದ ಕೇಂದ್ರ ಮಂತ್ರಿ ಪರಿಷತ್‌ನ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,‘ ಈ ಸಾಂಕ್ರಾಮಿಕ ರೋಗವು, ಶತಮಾನದಲ್ಲಿ ಒಮ್ಮೆ ಬರುವ ಬಿಕ್ಕಟ್ಟಾಗಿದ್ದು,, ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೇಂದ್ರ ಸಚಿವರು ಸ್ಥಳೀಯ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆಗಳನ್ನು ಗುರುತಿಸಿ ಸಹಾಯ ಮಾಡಬೇಕು. ಅವರಿಂದ ಪ್ರತಿಕ್ರಿಯೆ ಪಡೆಯಬೇಕು. ಅಲ್ಲದೇ, ಈ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗಿವೆಯೇ ಎಂಬುದನ್ನೂ ಖಚಿತ ಪಡಿಸಿಕೊಳ್ಳಬೇಕು’ ಎಂದು ಒತ್ತಿ ಹೇಳಿದರು.

ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ, ಆಮ್ಲಜನಕದ ಸೌಲಭ್ಯ ಹೆಚ್ಚಳ ಮತ್ತು ಅಗತ್ಯ ಔಷಧಿಗಳ ಲಭ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಧಾನಿ ಅವರಿಗೆ ಮಾಹಿತಿ ನೀಡಲಾಯಿತು.

ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವುದು, ಜನ್‌ಧನ್ ಖಾತೆದಾರರಿಗೆ ಆರ್ಥಿಕ ನೆರವು ನೀಡುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

‘ದೇಶದಲ್ಲಿ ಇದುವರೆಗೆ 15 ಕೋಟಿ ಜನರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲಾಗಿದೆ. ಭಾರತವು ಎರಡು ರೀತಿಯ ಕೋವಿಡ್ ಲಸಿಕೆಗಳನ್ನು ಉತ್ಪಾದಿಸಲು ಸಶಕ್ತವಾಗಿದೆ. ಕೋವಿಡ್‌ ಅನ್ನು ಹಿಮ್ಮೆಟ್ಟಿಸುವ ಬೃಹತ್ ಕಾರ್ಯಕ್ಕೆ  ಸಾರ್ವಜನಿಕ ಸಹಭಾಗಿತ್ವವು ಮುಖ್ಯ ಅಂಶವಾಗಿದೆ. ಏರುಗತಿಯಲ್ಲಿರುವ ಕೋವಿಡ್ ಅನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು’ ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ. 

ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಅವರು ಕೋವಿಡ್‌–19 ನಿರ್ವಹಣೆಯ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಿದರು.

ನಂತರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಮನ್ಸುಖ್ ಮಾಂಡವಿಯಾ ಅವರು ಸಚಿವರಿಗೆ ಆಮ್ಲಜನಕ ಮತ್ತು ಔಷಧಿಗಳ ಲಭ್ಯತೆ ಕುರಿತು ವಿವರಿಸಿದರು.

ದೇಶದಲ್ಲಿ ಕೋವಿಡ್‌ ಎರಡನೇ ಅಲೆಯು ಶುರುವಾದ ನಂತರ ಕೇಂದ್ರ ಸಚಿವರೊಂದಿಗೆ ಪ್ರಧಾನಿ ಮೋದಿ ಅವರು ನಡೆಸಿದ ಮೊದಲ ಸಭೆ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು