ಹಣದುಬ್ಬರ ಶ್ರೀಮಂತರನ್ನು ಹೆಚ್ಚು ಬಾಧಿಸುತ್ತಿದೆ: ಸಚಿವೆ ಹೇಳಿಕೆಗೆ ಸ್ವಾಮಿ ತರಾಟೆ

ಬೆಂಗಳೂರು: 'ಹಣಕಾಸು ವರ್ಷ 2022ರಲ್ಲಿ ಹಣದುಬ್ಬರವು ಬಡವರಿಗಿಂತ ಹೆಚ್ಚಾಗಿ ಶ್ರೀಮಂತರನ್ನು ಬಾಧಿಸುತ್ತಿದೆ' ಎಂದು ವಿತ್ತ ಸಚಿವಾಲಯ ಹೇಳಿದ್ದಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ನಿಜಕ್ಕೂ ಅವರು ಇದನ್ನು ಹೇಳಿದ್ದಾರೆಯೇ? ಇದು ಹೇಗಿದೆ ಎಂದರೆ, ಬಡವರಿಗೆ ಧಾನ್ಯಗಳನ್ನು ಕೊಳ್ಳಲು ಸಾಧ್ಯವಾಗದಿದ್ದರೆ ಕೇಕ್ ತಿನ್ನಲಿ ಬಿಡಿ ಎಂಬ ಫ್ರೆಂಚ್‌ನ ಪ್ರಚಲಿತ ಆಡು ಮಾತಿನಂತಿದೆ' ಎಂದು ಸುಬ್ರಮಣಿಯನ್ ಸ್ವಾಮಿ ಅವರು ನಿರ್ಮಲಾ ಸೀತಾರಮನ್ ಅವರ ಹೆಸರನ್ನು ಉಲ್ಲೇಖಿಸದೆ ಟೀಕಿಸಿದ್ದಾರೆ.
'ಮನಿಕಂಟ್ರೋಲ್.ಕಾಮ್'ನಲ್ಲಿ ಪ್ರಕಟಗೊಂಡಿರುವ ಸಿದ್ಧಾರ್ಥ್ ಉಪಸಾನಿ ಅವರ ವರದಿಯ ಸ್ಕ್ರೀನ್‌ಶಾಟ್‌ಅನ್ನು ಸುಬ್ರಮಣಿಯನ್ ಸ್ವಾಮಿ ಹಂಚಿಕೊಂಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಹಣದುಬ್ಬರವು ಬಡವರ ಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ವಿತ್ತ ಸಚಿವಾಲಯವು ಈ ಪ್ರತಿಕ್ರಿಯೆ ನೀಡಿದೆ ಎಂದು ಲೇಖನದ ಸ್ಕ್ರೀನ್‌ಶಾಟ್‌ನಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.
Did she really say this? It is on par with the French howler: “If poor can’t get grain let them eat cakes”. pic.twitter.com/GRcRDfOfez
— Subramanian Swamy (@Swamy39) May 14, 2022
ಫ್ರೆಂಚ್ ಆಡು ಮಾತು
1789ರಲ್ಲಿ, ಫ್ರೆಂಚ್‌ನಲ್ಲಿ ಧಾನ್ಯಗಳ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಪರಿಣಾಮ ಬ್ರೆಡ್‌ನ ಕೊರತೆ ಎದುರಾಗಿತ್ತು. ಇದರಿಂದ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿತ್ತು. ಈ ಸಂದರ್ಭದಲ್ಲಿ ಅಲ್ಲಿನ ರಾಣಿ ಮಾರಿ ಆಂತ್ವಾನೆತ, 'ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಲಿ ಬಿಡಿ' ಎಂದಿದ್ದರು. ಬ್ರೆಡ್‌ಗಿಂತ ಕೇಕ್ ದುಬಾರಿ. ಬ್ರೆಡ್ ಕೊಳ್ಳುವ ಸಾಮರ್ಥ್ಯವಿಲ್ಲದವರನ್ನು ಅಣಕಿಸಿದಂತಿರುವ ರಾಣಿಯ ಹೇಳಿಕೆ ಈಗಲೂ ಪ್ರಚಲಿತದಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.