ಬುಧವಾರ, ಜುಲೈ 6, 2022
23 °C

ಯುದ್ಧದ ಪರಿಣಾಮ- ಕೈಸುಡುತ್ತಿರುವ ಅಡುಗೆ ಎಣ್ಣೆ: ಬೆಲೆ ಭಾರೀ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಸೂರ್ಯಕಾಂತಿ ಎಣ್ಣೆಯ ಆಮದಿನ ಮೇಲೆ ಏಟು ಬಿದ್ದಿದೆ. ಇದರ ಪರಿಣಾಮ ಸೂರ್ಯಕಾಂತಿ ಎಣ್ಣೆಯ ಬೆಲೆಯು ಕೆಲವೇ ದಿನಗಳ ಅವಧಿಯಲ್ಲಿ ಲೀಟರ್‌ಗೆ ₹40ರಷ್ಟು ಏರಿಕೆಯಾಗಿದೆ. ರಾಜ್ಯದ ಹಲವೆಡೆ ಸೂಪರ್ ಮಾರ್ಕೆಟ್‌ಗಳಲ್ಲಿ ಗ್ರಾಹಕರಿಗೆ ಅಡುಗೆ ಎಣ್ಣೆ ಖರೀದಿ ಮೇಲೆಯೂ ಮಿತಿ ಹೇರಲಾಗಿದೆ.

‘ಯುದ್ಧ ನಿಲ್ಲದ ಹೊರತು ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಸಹಜ ಸ್ಥಿತಿಗೆ ಬರುವುದು ಕಷ್ಟ’ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

‘ಭಾರತವು ವರ್ಷಕ್ಕೆ ಸರಿಸುಮಾರು 25 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಶೇಕಡ 80ರಷ್ಟು ಪಾಲು ಉಕ್ರೇನ್‌ನಿಂದ ಬರುತ್ತಿದೆ. ಇನ್ನುಳಿದ ಪಾಲು ರಷ್ಯಾ ಮತ್ತು ಅರ್ಜೆಂಟೀನಾ ದೇಶಗಳಿಂದ ಆಮದು ಆಗುತ್ತಿದೆ. ಫೆಬ್ರುವರಿ ಕೊನೆಯ ವಾರದಲ್ಲಿ ಯುದ್ಧ
ಶುರುವಾದ ನಂತರ ಅಲ್ಲಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆ ಆಗುವುದು ನಿಂತಿದೆ. ಅದು ಈಗಿನ ಪರಿಸ್ಥಿತಿಗೆ ಕಾರಣ’ ಎಂದು ಕರ್ನಾಟಕ ಸಹಕಾರ
ಎಣ್ಣೆಬೀಜ ಬೆಳೆಗಾರರ ಮಹಾಮಂಡಳದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಅಡುಗೆ ಎಣ್ಣೆ ಆಮದಿಗೆ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಯುದ್ಧ ಶುರುವಾದ ನಂತರ ಆ ಒಪ್ಪಂದಕ್ಕೆ ಅನುಗುಣವಾಗಿ ಅಡುಗೆ ಎಣ್ಣೆ ಬರುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ತಕ್ಷಣಕ್ಕೆ ಕೊನೆಗೊಂಡರೂ, ಉಕ್ರೇನ್‌ನಿಂದ ಇಲ್ಲಿಗೆ ಸೂರ್ಯಕಾಂತಿ ಎಣ್ಣೆ ಬರಲು 40 ರಿಂದ 45 ದಿನಗಳು ಬೇಕಾಗುತ್ತದೆ’ ಎಂದು ಮೂಲಗಳು ಅಂದಾಜಿಸಿವೆ.

ಕರ್ನಾಟಕದಲ್ಲಿ ವಾರ್ಷಿಕ ಸರಿಸುಮಾರು ಮೂರು ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ ಬಳಕೆ ಇದೆ. ಯುದ್ಧ ಶುರುವಾದ ನಂತರ ಉಕ್ರೇನ್‌ನ ಎಣ್ಣೆ ಗಿರಣಿಗಳು ಕೆಲಸ ನಿಲ್ಲಿಸಿವೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಖರೀದಿಗೆ ಮಿತಿ: ಬೆಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ಸೂಪರ್‌ಮಾರ್ಕೆಟ್‌ಗಳಲ್ಲಿ ಅಡುಗೆ ಎಣ್ಣೆ ಖರೀದಿಯ ಮೇಲೆ ಮಿತಿ ಹೇರಲಾಗಿದೆ. ಕೆಲವೆಡೆ ಕಿರಾಣಿ ಅಂಗಡಿಗಳಲ್ಲಿಯೂ ಮಿತಿ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಎಸ್ಎಸ್ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಬೇಡಿಕೆಯಷ್ಟು ನೀಡಲಾಗುತ್ತಿದ್ದರೂ ಸಗಟು ವ್ಯಾಪಾರಿಗಳಿಗೆ ಅಡುಗೆ ಎಣ್ಣೆ ನೀಡುತ್ತಿಲ್ಲ.

‘ಮೂರ್ನಾಲ್ಕು ದಿನಗಳಿಂದ ಅಡುಗೆ ಎಣ್ಣೆ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮಿತಿ ವಿಧಿಸಲಾಗಿದೆ’ ಎಂದು ಕಲಬುರಗಿಯ ಸೂಪರ್‌ಮಾರ್ಕೆಟ್‌ ಸಿಬ್ಬಂದಿ ಒಬ್ಬರು ತಿಳಿಸಿದರು.

ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಅಡುಗೆ ಎಣ್ಣೆ ದರವು ಲೀಟರ್‌ಗೆ ₹ 30ರಷ್ಟು ಏರಿಕೆಯಾಗಿದೆ. ಕಿರಾಣಿ ಅಂಗಡಿಗಳಲ್ಲಿ ₹ 155ರ ಸೂರ್ಯಕಾಂತಿ ಎಣ್ಣೆ ಪೊಟ್ಟಣಗಳನ್ನು ₹ 185ಕ್ಕೆ ಮಾರಲಾಗುತ್ತಿದೆ.

ವ್ಯಾಪಕವಾಗಿ ಬಳಕೆಯಾಗುವ ಯಾವುದೇ ಒಂದು ಅಡುಗೆ ಎಣ್ಣೆಯ ಬೆಲೆ ದುಬಾರಿಯಾದರೆ ಅದರ ಪರಿಣಾಮವು ಇತರ ಅಡುಗೆ ಎಣ್ಣೆಗಳ ಬೆಲೆಯ ಮೇಲೆಯೂ ಇರುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ವಾರ್ಷಿಕ ಸರಿಸುಮಾರು 2 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ ಉತ್ಪಾದನೆ ಆಗುತ್ತದೆ. ಇದರಿಂದ ದೇಶಿ ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಅಡುಗೆ ಎಣ್ಣೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಸಾಲ್ವೆಂಟ್ ಎಕ್ಸ್‌ ಟ್ರಾಕ್ಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ) ಫೆಬ್ರುವರಿ ಕೊನೆಯ ವಾರದಲ್ಲಿ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು