ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಮ ಸಡಿಲಿಕೆ ವಿರುದ್ಧ ಅರ್ಜಿ; ಪ್ರತಿಕ್ರಿಯೆಗೆ ಕೇರಳ ಸರ್ಕಾರಕ್ಕೆ ಸೂಚನೆ

Last Updated 19 ಜುಲೈ 2021, 9:48 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಸರ್ಕಾರವು ಬಕ್ರೀದ್‌ ಹಬ್ಬದ ದೃಷ್ಟಿಯಿಂದ ರಾಜ್ಯದಲ್ಲಿ ಮೂರು ದಿನಗಳ ಮಟ್ಟಿಗೆ ಕೋವಿಡ್‌ ನಿಯಮಗಳನ್ನು ಸಡಿಲಗೊಳಿಸಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿ ಬಗ್ಗೆ ತನ್ನ ನಿಲುವು ತಿಳಿಸುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಸೂಚನೆ ನೀಡಿದೆ.

ಜುಲೈ 21ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಇದೇ 18ರಿಂದ–20ರ ತನಕ ಎ,ಬಿ ಮತ್ತು ಸಿ ವರ್ಗದ ಪ್ರದೇಶಗಳಲ್ಲಿ ಬಟ್ಟೆ, ಚಪ್ಪಲಿ, ಚಿನ್ನಾಭರಣ ಸೇರಿದಂತೆ ಇತರೆ ಅಂಗಡಿಗಳಿಗೆ ಬೆಳಿಗ್ಗೆ 7ರಿಂದ ರಾತ್ರಿ 8ರ ತನಕ ಕಾರ್ಯನಿರ್ವಹಿಸಲು ಕೇರಳ ಸರ್ಕಾರ ಅನುಮತಿ ನೀಡಿದೆ. ಡಿ ವರ್ಗದ ಪ್ರದೇಶದಲ್ಲಿ ಜು.19ರಂದು ಮಾತ್ರ ಈ ಅಂಗಡಿಗಳು ತೆರೆದಿರಬಹುದಾಗಿದೆ.

ಈ ಬಗ್ಗೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಘೋಷಣೆ ಮಾಡಿದ್ದರು.

ಕೇರಳದಲ್ಲಿ ಸೋಂಕು ದೃಢ ಪ್ರಮಾಣವನ್ನು ಆಧರಿಸಿ ಎ,ಬಿ,ಸಿ ಮತ್ತು ಡಿ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ.

ನ್ಯಾಯಮೂರ್ತಿಗಳಾದ ಆರ್‌.ಎಫ್‌ ನರೀಮನ್‌ ಮತ್ತು ಬಿ.ಆರ್‌ ಗವಾಯಿ ಅವರಿದ್ದ ಪೀಠವು ಈ ಅರ್ಜಿ ವಿಚಾರಣೆ ನಡೆಸಿತು. ಸೋಮವಾರವೇ ಅರ್ಜಿ ಬಗ್ಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿರುವ ಪೀಠವು ಮಂಗಳವಾರ ಬೆಳಿಗ್ಗೆ ಇದೇ ಅರ್ಜಿಯನ್ನು ಮೊದಲು ವಿಚಾರಣೆ ನಡೆಸುವುದಾಗಿ ‍ಹೇಳಿದೆ.

ಕೇರಳ ಸರ್ಕಾರದ ನಿಯಮ ಸಡಿಲಿಕೆ ಕ್ರಮವನ್ನು ವಿರೋಧಿಸಿ ದೆಹಲಿ ಮೂಲದ ಕೆ.ಡಿ ನಂಬಿಯಾರ್‌ ಅವರು ಅರ್ಜಿ ಸಲ್ಲಿಸಿದ್ದರು.

‘ಕೇರಳದಲ್ಲಿ ಸೋಂಕು ದೃಢ ಪ್ರಮಾಣವು ಶೇಕಡ 10ಕ್ಕಿಂತ ಹೆಚ್ಚಿದೆ. ಆದರೂ ಬಕ್ರೀದ್‌ಗಾಗಿ ಕೋವಿಡ್‌ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ’ ಎಂದು ಅರ್ಜಿದಾರರ ಪರ ವಕೀಲರಾದ ವಿಕಾಸ್‌ ಸಿಂಗ್‌ ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

‘ಈ ರೀತಿಯ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಜನರ ಜೀವಗಳೊಂದಿಗೆ ಆಟವಾಡಬಾರದು.ಇದು ರಾಜಕೀಯ ದೃಷ್ಟಿಯಿಂದ ಕೈಗೊಂಡ ಕ್ರಮ. ರಾಜಕೀಯ ಹಿತಾಸಕ್ತಿಗಾಗಿ ಜನರ ಮೂಲಭೂತ ಹಕ್ಕುಗಳನ್ನು ಕಡೆಗಣಿಸಬಾರದು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT