ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷಭಾಷಣಕ್ಕೆ ಕಡಿವಾಣ: ಸುಪ್ರೀಂ ಕೋರ್ಟ್‌ ಸೂಚನೆ

ಸುಪ್ರೀಂ ಕೋರ್ಟ್‌ ಸೂಚನೆ l ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ
Published : 21 ಅಕ್ಟೋಬರ್ 2022, 21:24 IST
ಫಾಲೋ ಮಾಡಿ
Comments

ನವದೆಹಲಿ/ಬೆಂಗಳೂರು:‌ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಕ್ರಮ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಮೂರು ರಾಜ್ಯ ಸರ್ಕಾರಗಳಿಗೆ ಮಧ್ಯಂತರ ಆದೇಶ ನೀಡಿದೆ. ಇಂತಹ ಪ್ರಕರಣಗಳಲ್ಲಿ ಕ್ರಮ ತೆಗದುಕೊಳ್ಳದೇ ಇದ್ದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದು ಕೋರ್ಟ್‌ ಶುಕ್ರವಾರ ಎಚ್ಚರಿಕೆ ನೀಡಿದೆ.

ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ನಡೆದಿದ್ದ ಧರ್ಮ ಸಂಸತ್‌ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ದ ನೀಡಿದ್ದ ದ್ವೇಷಪೂರಿತ ಹೇಳಿಕೆಗಳು ಮತ್ತು ಪ್ರಚೋದನಕಾರಿ ಕರೆಗಳ ವಿರುದ್ಧ ಶಹೀನ್‌ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಮತ್ತು ಋಷಿಕೇಶ್ ರಾಯ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ಸಂವಿಧಾನದ 51ನೇ ಎ ವಿಧಿಯು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತದೆ. ಆದರೆ 21ನೇ ಶತಮಾನದಲ್ಲಿ ನಾವು ಧರ್ಮದ ಹೆಸರಿನಲ್ಲಿ ಎಷ್ಟು ಸಂಕುಚಿತರಾಗಿದ್ದೇವೆ? ಈ ಹೇಳಿಕೆಗಳು ವಿಚ್ಛಿದ್ರಕಾರಿಯಾಗಿವೆ’ ಎಂದು ಪೀಠವು ಆಘಾತ ವ್ಯಕ್ತಪಡಿಸಿತು.

‘ಇಂತಹ ಹೇಳಿಕೆಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಕ್ರಮ ತೆಗೆದುಕೊಂಡ ಬಗ್ಗೆ ವರದಿ ನೀಡಬೇಕು’ ಎಂದು ಪೀಠವು ಆದೇಶಿಸಿದೆ.ಅರ್ಜಿದಾರರು ಪ್ರತಿವಾದಿಗಳಾಗಿ ನಮೂದಿಸಿದ್ದ ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಮುಖ್ಯಸ್ಥರಿಗೆ ಈ ಸಂಬಂಧ ನೋಟಿಸ್‌ ಜಾರಿ ಮಾಡಲಾಗಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್, ‘ನಾವು ಅರ್ಜಿ ಸಲ್ಲಿಸುತ್ತಲೇ ಇದ್ದೇವೆ, ನ್ಯಾಯಾಲಯದ ಮುಂದೆ ಬರುತ್ತಲೇ ಇದ್ದೇವೆ. ಆದರೆ ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಹೆಚ್ಚಾಗುತ್ತಲೇ ಇದೆ. ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಬೇಕು, ಮುಸ್ಲಿಮರ ಕತ್ತು ಸೀಳಬೇಕು ಎಂದೂ ಕರೆ ನೀಡಲಾಗಿದೆ’ ಎಂದು ಹೇಳಿದರು.

ಆಗ ಪೀಠವು, ‘ಮುಸ್ಲಿಮರೂ ದ್ವೇಷ ಭಾಷಣ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಸಿಬಲ್‌, ‘ಯಾರು ದ್ವೇಷ ಭಾಷಣ ಮಾಡಿದರೂ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಆಗ ಪೀಠವು, ‘ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿರುವ ಭಾರತದ ಜಾತ್ಯತೀತ ಸ್ವರೂಪವನ್ನು ರಕ್ಷಿಸುವ ಉದ್ದೇಶದಿಂದ ದ್ವೇಷ ಭಾಷಣದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿತು.

ದೂರು ನೀಡಲೆಂದು ಕಾಯುವಂತಿಲ್ಲ...

l ದ್ವೇಷ ಭಾಷಣ ನಡೆದಾಗ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಯಾರಾದರೂ ದೂರು ನೀಡಲಿ ಎಂದು ಕಾಯಬಾರದು

l ರಾಜ್ಯ ಪೊಲೀಸ್‌ ಮುಖ್ಯಸ್ಥರು ತಮ್ಮ ಅಧೀನ ಅಧಿಕಾರಿಗಳಿಗೆ ಈ ಸಂಬಂಧ ತಕ್ಷಣವೇ ನಿರ್ದೇಶನ ನೀಡಬೇಕು

l ಭಾರತೀಯ ದಂಡ ಸಂಹಿತೆಯ 153ಎ (ಧರ್ಮ, ಜಾತಿ, ಜನಾಂಗ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿ ಆಧಾರದಲ್ಲಿ ಭಿನ್ನ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ) , 153ಬಿ (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುವುದು, ಬರಹ ಬರೆಯುವುದು ಇತ್ಯಾದಿ) ಮತ್ತು 295ಎ (ಧಾರ್ಮಿಕ ನಂಬಿಕೆಗಳು ಮತ್ತು ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರುವುದು) ಸೆಕ್ಷನ್‌ಗಳಲ್ಲಿ ವಿವರಿಸಲಾದಂತಹ ಕೃತ್ಯಗಳಿಗೆ ಸಮನಾದ ಭಾಷಣ, ಕೃತ್ಯಗಳು ನಡೆದಾಗ ತಕ್ಷಣವೇ ಪ್ರಕರಣ ದಾಖಲಿಸಬೇಕು ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು

l ದ್ವೇಷ ಭಾಷಣ ಮಾಡುವ ವ್ಯಕ್ತಿಯು ಯಾವ ಧರ್ಮದವರಾಗಿದ್ದರೂ ಪ್ರಕರಣ ದಾಖಲಿಸಿ, ಕ್ರಮ ತೆಗೆದುಕೊಳ್ಳಬೇಕು

l ದ್ವೇಷ ಭಾಷಣದ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದನ್ನು ನ್ಯಾಯಾಂಗ ನಿಂದನೆ ಎಂದು ‍ಪರಿಗಣಿಸಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT