ಬುಧವಾರ, ಜನವರಿ 19, 2022
26 °C
ತೇಜ್‌ಪಾಲ್‌ ಪ್ರಕರಣ: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಗೋವಾ

ವಿಚಾರಣಾ ನ್ಯಾಯಾಲಯದ ಆದೇಶವು 5ನೇ ಶತಮಾನಕ್ಕೆ ಹೊಂದುವಂತಿದೆ– ಗೋವಾ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿದ 2013ರ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಹೆಸರಿಸಿ, ಅವಮಾನಿಸಲಾಗಿದೆ. ಈ ಸಂಬಂಧ ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ‘ಐದನೇ ಶತಮಾನಕ್ಕೆ ಸೂಕ್ತವಾಗಿದೆ’ ಎಂದು ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ನ ಪೀಠಕ್ಕೆ ಬುಧವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಎಂ.ಎಸ್. ಜವಾಲ್ಕರ್ ಅವರನ್ನೊಳಗೊಂಡ ಗೋವಾ ಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿತು.

ಈ ಪ್ರಕರಣದಲ್ಲಿ ತನ್ನ ಖುಲಾಸೆಯ ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿಯ ನಿರ್ವಹಣೆಯನ್ನು ಪ್ರಶ್ನಿಸಿ ತೇಜ್‌ಪಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ. ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗೋವಾ ಸರ್ಕಾರದ ಪರ ಹಾಜರಿದ್ದರು.

‘ವಿಚಾರಣಾ ನ್ಯಾಯಾಲಯ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿಯೇ ಸರಿ ಇಲ್ಲ. ಸಂತ್ರಸ್ತ ಮಹಿಳೆಯ ಹೆಸರನ್ನು ಉಲ್ಲೇಖಿಸಿ ಅವಮಾನಿಸಲಾಗಿದೆ’ ಎಂದು ಮೆಹ್ತಾ ಬೇಸರ ವ್ಯಕ್ತಪಡಿಸಿದರು.

2013ರ ನವೆಂಬರ್‌ನಲ್ಲಿ ಗೋವಾದ ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತನ್ನ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೆಹಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. 2021ರ ಮೇ 21 ರಂದು ಸೆಷನ್ಸ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು. ನಂತರ ಗೋವಾ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಈ ವೇಳೆ ತೇಜ್‌ಪಾಲ್‌ ಅವರ ಎರಡು ಅರ್ಜಿಗಳನ್ನು ಪರಿಗಣಿಸುವಂತೆ ಅವರ ಪರ ವಕೀಲ ಅಮಿತ್‌ ದೇಸಾಯಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ವಿರುದ್ಧ ಗೋವಾ ಸರ್ಕಾರದ ಮೇಲ್ಮನವಿಯ ನಿರ್ವಹಣೆಯನ್ನು ತೇಜ್‌ಪಾಲ್ ಪ್ರಶ್ನಿಸಿದ್ದಾರೆ. ಸೆಷನ್ಸ್‌ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಆ ದಿನದಂದು ಅರ್ಜಿ ಸಲ್ಲಿಸಲು ಸರ್ಕಾರ ಅನುಮತಿಯನ್ನೇ ನೀಡಿರಲಿಲ್ಲ ಎಂದು ದೇಸಾಯಿ ಪೀಠಕ್ಕೆ ತಿಳಿಸಿದರು.

ಅಲ್ಲದೆ ಪ್ರಕರಣದ ಕುರಿತು ‘ಇನ್-ಕ್ಯಾಮೆರಾ’ ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಿರುವುದಾಗಿ ಅವರು ಹೇಳಿದರು. ಇದಕ್ಕೆ ಮೆಹ್ತಾ ವಿರೋಧ ವ್ಯಕ್ತಪಡಿಸಿದರು.

ಈ ವಿಷಯದ ಕುರಿತು ನಂತರ ವಿಚಾರಣೆ ನಡೆಸಲಾಗುವುದು ಎಂದ ಪೀಠವು ವಿಚಾರಣೆಯನ್ನು ಮುಂದೂಡಿತು. ಬುಧವಾರದ ವಿಚಾರಣೆ ವರ್ಚುವಲ್ ರೂಪದಲ್ಲಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು