ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ‘ಧರ್ಮದ ಹೆಸರಿನಲ್ಲಿ ಜನರ ವಿಭಜನೆ’–ರಾಜನಾಥ್‌ ಸಿಂಗ್‌

Last Updated 14 ಮಾರ್ಚ್ 2021, 19:12 IST
ಅಕ್ಷರ ಗಾತ್ರ

ಬಿಸ್ವನಾಥ್/ ಘೋಪುರ : ‘ಅಸ್ಸಾಂನಲ್ಲಿ ಭಯೋತ್ಪಾದನೆ ಮತ್ತು ದಂಗೆಗಳು ಕಡಿಮೆಯಾಗಿವೆ. ಇದು ಸರ್ಕಾರದ ಅಭಿವೃದ್ದಿ ಕಾರ್ಯಗಳಿಗೆ ಇನ್ನಷ್ಟು ವೇಗವನ್ನು ನೀಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಂಗ್‌ ಅವರು ಭಾನುವಾರ ಹೇಳಿದರು.

‘ಕಾಂಗ್ರೆಸ್‌ನ ತರುಣ್ ಗೊಗೊಯಿ ಅವರು ಅಸ್ಸಾಂನಲ್ಲಿ 15 ವರ್ಷ ಆಳ್ವಿಕೆ ನಡೆಸಿದರು. ಆದರೆ ಅವರು ಎಂದೂ ಎಐಯುಡಿಎಫ್‌ ಜತೆಗೆ ಮೈತ್ರಿ ಮಾಡಿಕೊಂಡಿರಲಿಲ್ಲ. ಈಗಿನ ಕಾಂಗ್ರೆಸ್ ನಾಯಕರು ಎಐಯುಡಿಎಫ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರಿ ಕಸಿಯುವ ಏಕೈಕ ಕಾರಣದಿಂದ ಈ ಮೈತ್ರಿಮಾಡಿಕೊಂಡು ಜನರನ್ನು ವಿಭಜಿಸುತ್ತಿದ್ದಾರೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರೋಪಿಸಿದ್ದಾರೆ.

‘ಈಚೆಗೆ ಇಲ್ಲಿಗೆ ಕಾಂಗ್ರೆಸ್ ನಾಯಕಿಯೊಬ್ಬರು ಬಂದಿದ್ದರು. ಚಹಾತೋಟಕ್ಕೆ ಹೋಗಿ ಚಹಾ ಎಲೆ ಬಿಡಿಸಿದರು. ಇಂತಹ ಗಿಮಿಕ್‌ಗಳ ಅವಶ್ಯಕತೆ ಇದೆಯೇ’ ಎಂದು ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.

ಬಿಸ್ವನಾಥ್‌ನಲ್ಲಿ ಬಿಜೆಪಿಯ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,‘ಬಿಜೆಪಿ ಆಡಳಿತದಲ್ಲಿ ಹಲವಾರು ಬಂಡುಕೋರರ ಗುಂಪುಗಳು ಶರಣಾಗತಿಯಾದವು. ಇದರಿಂದಾಗಿ ಅಸ್ಸಾಂನಲ್ಲಿ ಶಾಂತಿ ಮರಳಿದೆ. ಬಿಸ್ವನಾಥ್‌ಗೆ ನನ್ನನ್ನು ಆಹ್ವಾನಿಸಿದಾಗ ನನಗೆ 2014ರ ಆದಿವಾಸಿ ಹತ್ಯಾಕಾಂಡ ನೆನಪಿಗೆ ಬಂತು. ಆದರೆ ಈಗ ಇಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆ. ರಾಜ್ಯದಲ್ಲಿ ಶಾಂತಿಯಿದೆ ಎಂಬುದಕ್ಕಿಂತ ಉತ್ತಮವಾದ ಸುದ್ದಿ ಏನಿದೆ’ ಎಂದರು.

‘ಬಿಜೆಪಿ ನೇತೃತ್ವದ ಸರ್ಕಾರವು ಭಾರತ–ಬಾಂಗ್ಲಾದೇಶದ ನಡುವಿನ ನದಿಪಾತ್ರದ ಜಾಗಗಳಲ್ಲಿ ಸ್ಮಾರ್ಟ್‌ಬೇಲಿಯನ್ನು ಹಾಕಿದೆ. ದುಬ್ರಿ ಅಂತರರಾಷ್ಟ್ರೀಯ ಗಡಿಯನ್ನು ಮುಚ್ಚಲಾಗಿದೆ. ಬಿಜೆಪಿ ಮತ್ತೆ ಅಧಿಕಾರ ಬಂದ ಬಳಿಕ ಉಳಿದ ಭಾಗಗಳಲ್ಲಿ ಬೇಲಿಗಳನ್ನು ಹಾಕಲಾಗುವುದು’ ಎಂದು ಅವರು ಭರವಸೆ ನೀಡಿದರು.

ಅಮಿತ್ ಶಾ ಟೀಕೆ: ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕಾಂಗ್ರೆಸ್‌, ಎಐಯುಡಿಎಫ್ ಜತೆಗೆ ಮೈತ್ರಿ ಮಾಡಿಕೊಂಡಿ ರುವುದನ್ನು ಟೀಕಿಸಿದ್ದಾರೆ. ‘ಎಐಯುಡಿಎಫ್‌ ಅಕ್ರಮ ವಲಸೆಯನ್ನು ಬೆಂಬಲಿಸುತ್ತದೆ. ಕಾಂಗ್ರೆಸ್‌ಗೆ ಮತ ನೀಡಿದರೆ, ಅದು ಎಐಯುಡಿಎಫ್‌ಗೆ ಹೋಗುತ್ತದೆ. ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT