ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂನ ಬ್ಯಾಂಕ್ ವ್ಯವಸ್ಥಾಪಕ, ರಾಜಸ್ಥಾನ ಮೂಲದ ವಿಜಯಕುಮಾರ್ ಅವರನ್ನು ಉಗ್ರರು ಗುರುವಾರ ಗುಂಡಿಟ್ಟು ಕೊಂದಿದ್ದಾರೆ. ಭದ್ರತಾ ವ್ಯವಸ್ಥೆಯು ಉತ್ತಮಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದರೂ 2022ರಲ್ಲಿ ಈ ರೀತಿಯಲ್ಲಿ ನಡೆದ 17ನೇ ಹತ್ಯೆ ಇದು. ಕಾಶ್ಮೀರದಲ್ಲಿ ಉಗ್ರರು ಮುಸ್ಲಿಮೇತರರನ್ನು ಗುರಿಯಾಗಿಸಿ ಕೊಲ್ಲುವ ತಂತ್ರ ಅನುಸರಿಸುತ್ತಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾಯೋಜಕತ್ವದ ಇಲಾಕ್ವಾಯ್ ದೆಹಾತಿ ಬ್ಯಾಂಕ್ ಎಂಬ ಗ್ರಾಮೀಣ ಬ್ಯಾಂಕ್‌ನ ಸ್ಥಳೀಯ ಕಚೇರಿಯ ಮುಖ್ಯಸ್ಥರಾಗಿ ವಿಜಯಕುಮಾರ್ ಕೆಲಸ ಮಾಡುತ್ತಿದ್ದರು.
ಪಿಸ್ತೂಲ್ ಹಿಡಿದ ವ್ಯಕ್ತಿಯೊಬ್ಬ ಬ್ಯಾಂಕ್ ಶಾಖೆಯೊಳಗೆ ನುಗ್ಗಿ, ಗುಂಡು ಹಾರಿಸಿ ಪರಾರಿಯಾಗುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಜಯಕುಮಾರ್ ಅವರು ಇತ್ತೀಚೆಗಷ್ಟೇ ಕುಲ್ಗಾಂನಲ್ಲಿ ಕೆಲಸಕ್ಕೆ ನಿಯೋಜನೆ
ಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಮೇ 31ರಂದು ಇದೇ ಜಿಲ್ಲೆಯಲ್ಲಿ ಮುಸ್ಲಿಮೇತರ ಶಿಕ್ಷಕಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಕೇಂದ್ರ ಕಾಶ್ಮೀರದ ಚಡೂರ ಎಂಬಲ್ಲಿ ಅಮ್ರೀನ್ ಭಟ್ ಎಂಬ ಟಿ.ವಿ. ಕಲಾವಿದೆಯ ಹತ್ಯೆ ಆಗಿತ್ತು. ಮೇ 12ರಂದು ತಹಶೀಲ್ದಾರ್ ಕಚೇರಿಯೊಳಗೆ ಕೆಲಸ ಮಾಡುತ್ತಿದ್ದ ಪಂಡಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಕೊಲ್ಲಲಾಗಿತ್ತು. ಕರ್ತವ್ಯದಲ್ಲಿ ಇಲ್ಲದ ಹೊತ್ತಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನೂ ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿದೆ.
ತಮ್ಮನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಮತ್ತೊಂದು ಹತ್ಯೆ ನಡೆದಿದೆ.
ಪರಾರಿಯಾಗುವವರಿಗೆ ತಡೆ: ಭದ್ರತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ನಿಯೋಜನೆಯ ಭರವಸೆಯ ನಡುವೆಯೂ ಪಂಡಿತ ಸಮುದಾಯಕ್ಕೆ ಸೇರಿದ ಸರ್ಕಾರಿ ಉದ್ಯೋಗಿಗಳು ಕಾಶ್ಮೀರದಿಂದ ಪರಾರಿ ಆಗುತ್ತಿದ್ದಾರೆ. ಅವರೆಲ್ಲರೂ ಕುಟುಂಬದ ಜತೆಗೆ ಜಮ್ಮು ಕಡೆಗೆ ಸಾಗುತ್ತಿದ್ದಾರೆ.
ಆದರೆ, ಹೀಗೆ ಪರಾರಿಯಾಗುತ್ತಿರುವ ಪಂಡಿತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ ಎಂಬ ವರದಿಗಳಿವೆ. ‘ಶಿಬಿರಗಳಿಂದ ಕುಟುಂಬದ ಜತೆಗೆ ಹೊರಗೆ ಬರಲು ಕೂಡ ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ನಾವು ಕಾಶ್ಮೀರ ತೊರೆಯುತ್ತಿದ್ದೇವೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ’ ಎಂದು ಸರ್ಕಾರದ ಇಲಾಖೆಯೊಂದರಲ್ಲಿ ಎಂಜಿನಿಯರ್ ಆಗಿರುವ ಅಶ್ವನಿ ಸಂಧು ಹೇಳಿದ್ದಾರೆ.
ಶಾ ಸಮಾಲೋಚನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನುರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ರಾ ಮುಖ್ಯಸ್ಥ ಸಮಂತ್ ಗೋಯಲ್ ಅವರು ಗುರುವಾರ ಭೇಟಿಯಾಗಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗ ಮಾಡಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.