ಶನಿವಾರ, ಮಾರ್ಚ್ 25, 2023
25 °C

ತಮ್ಮದೇ ಪಕ್ಷದ ಐಟಿ ಸೆಲ್‌ಗೆ ರಾಕ್ಷಸ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕವು (ಐಟಿ ಸೆಲ್‌) ಯರ್‍ರಾಬಿರ‍್ರಿಯಾಗಿ ವರ್ತಿಸುತ್ತಿದೆ ಮತ್ತು ತಮ್ಮ ವಿರುದ್ಧ ‘ಹೊಲಸು’ ಅಭಿಯಾನ ನಡೆಸುತ್ತಿದೆ ಎಂದು ಅದೇ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದ್ದಾರೆ. ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರ ವಿರುದ್ಧವೂ ಸ್ವಾಮಿ ಹರಿಹಾಯ್ದಿದ್ದಾರೆ. 

‘ಬಿಜೆಪಿ ಐಟಿ ಸೆಲ್‌ನ ಕೆಲವರು ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದಕ್ಕಾಗಿಯೇ ಟ್ವಿಟರ್‌ ಖಾತೆಗಳನ್ನು ತೆರೆದಿದ್ದಾರೆ. ಐಟಿ ಸೆಲ್‌ನ ಹೊಲಸು ಅಭಿಯಾನಕ್ಕೆ ಬಿಜೆಪಿಯನ್ನು ಹೊಣೆಯಾಗಿಸಬಾರದು ಎಂದಾದರೆ, ಈ ಅಭಿಯಾನಕ್ಕೆ ಪ್ರತಿಯಾಗಿ ನನ್ನ ಹಿಂಬಾಲಕರು ಸಹ ವೈಯಕ್ತಿಕ ದಾಳಿಗಳನ್ನು ಆರಂಭಿಸಿದರೆ, ಅದಕ್ಕೆ ನನ್ನನ್ನು ಹೊಣೆಯಾಗಿಸಬಾರದು’ ಎಂದು ಸ್ವಾಮಿ ಟ್ವೀಟ್‌ ಒಂದರಲ್ಲಿ ಹೇಳಿದ್ದಾರೆ.

‘ಇಂಥ ವೈಯ ಕ್ತಿಕ ದಾಳಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ, ಇಂಥವರನ್ನು ನಿರ್ಲಕ್ಷಿಸಿ’ ಎಂದು ಅವರ ಅಭಿಮಾನಿಯೊಬ್ಬರು ಸ್ವಾಮಿಗೆ ಟ್ವೀಟ್‌ ಮೂಲಕ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ನಿರ್ಲಕ್ಷಿಸಿದ್ದೇನೆ. ಆದರೆ ಬಿಜೆಪಿಯು ಇಂಥವರನ್ನು ಹೊರಗಟ್ಟಬೇಕು. ಮಾಳವೀಯ ಎಂಬ ವ್ಯಕ್ತಿಯೊಬ್ಬರು ಹೊಲಸು ಪ್ರಚಾರ ನಡೆಸುತ್ತಿದ್ದಾರೆ. ನಮ್ಮದು ಮರ್ಯಾದಾ ಪುರುಷೋತ್ತಮ ರಾಮನ ಪಕ್ಷವೇ ವಿನಾ ದುರ್ಯೋಧನ ಅಥವಾ ದುಶ್ಶಾಸನರ ಪಕ್ಷವಲ್ಲ’ ಎಂದಿದ್ದಾರೆ.

ಸ್ವಾಮಿ ಅವರ ಟ್ವೀಟ್‌ ನಂತರ ಅವರ ಬೆಂಬಲಿಗರು ಮಾಳವೀಯ ವಿರುದ್ಧ ಟ್ವೀಟ್‌ ಮಾಡಲು ಆರಂಭಿಸಿದ್ದರು. ಮಾಳವೀಯ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳನ್ನು ಪ್ರಶ್ನಿಸಿದ ಸ್ವಾಮಿ ಅವರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸುವಂತೆ ಬಿಜೆಪಿಯ ಕೆಲವು ಬೆಂಬಲಿಗರಿಗೆ ಸಂದೇಶ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ’ ಎಂದು ಸ್ವಾಮಿ ಅವರ ನಿಕಟವರ್ತಿಗಳಲ್ಲಿ ಕೆಲವರು ಹೇಳಿದ್ದಾರೆ.

ಕೋವಿಡ್‌–19 ಸಂದರ್ಭದಲ್ಲಿ ಸರ್ಕಾರವು ಅರ್ಥವ್ಯವಸ್ಥೆಯನ್ನು ನಿರ್ವಹಿಸಿದ್ದ ರೀತಿ ಹಾಗೂ ಜೆಇಇ–ನೀಟ್‌ ಪರೀಕ್ಷೆಗಳನ್ನು ಆಯೋಜಿಸುವ ನಿರ್ಧಾರವನ್ನು ಸ್ವಾಮಿ ಅವರು ಟೀಕಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು