ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ 3ನೇ ಹಂತದ ಲಸಿಕೆ: ಹರ್ಷವರ್ಧನ್‌

ಲೋಕಸಭೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮಾಹಿತಿ
Last Updated 5 ಫೆಬ್ರವರಿ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಮೂರನೇ ಹಂತದ ಕೋವಿಡ್-19 ಲಸಿಕೆ ಕಾರ್ಯಕ್ರಮವು ಮಾರ್ಚ್‌ನಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ನೀಡಲಾಗುತ್ತದೆ. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ರಾಜಕೀಯ ನಾಯಕರಿಗೆ ಲಸಿಕೆ ನೀಡಲು ಸರ್ಕಾರವು ರೂಪುರೇಷೆ ಸಿದ್ಧಪಡಿಸಿದೆ.

ಮೂರನೇ ಹಂತದ ಕೋವಿಡ್‌-19 ಲಸಿಕೆ ಕಾರ್ಯಕ್ರಮದಲ್ಲಿ ಅಂದಾಜು 27 ಕೋಟಿ ಜನರಿಗೆ ಲಸಿಕೆ ನೀಡಲು ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ. ಈ 27 ಕೋಟಿ ಜನರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೆಲವರೂ ಇರಲಿದ್ದಾರೆ. ಕೆಲವು ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಕೋವಿಡ್ ತಗಲುವ ಅಪಾಯವಿರುವವರನ್ನು ಮಾತ್ರ ಈ ವರ್ಗದಲ್ಲಿ ಸೇರಿಸಲಾಗುತ್ತದೆ. ಅವರಿಗೂ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

‘ಮೂರನೇ ಹಂತದ ಲಸಿಕೆ ಕಾರ್ಯಕ್ರಮವು ಇಂತಹ ದಿನವೇ ಆರಂಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೊದಲ ಮತ್ತು ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಪೂರ್ಣವಾದ ತಕ್ಷಣವೇ ಮೂರನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ, ಮಾರ್ಚ್‌ ತಿಂಗಳಲ್ಲೇ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ದೃಢವಾಗಿ ಹೇಳುತ್ತೇನೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸುತ್ತಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ತಯಾರಿಕೆಯ ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಗಳನ್ನಷ್ಟೇ ನೀಡಲಾಗುತ್ತಿದೆ. ಇವೆರಡೂ ಲಸಿಕೆಗಳು ಸುರಕ್ಷಿತವಾಗಿವೆ. ಇವೆರಡರ ಹೊರತಾಗಿ ಇನ್ನೂ ಮೂರು ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿವೆ. ಎರಡು ಲಸಿಕೆಗಳು 1ನೇ ಹಂತ, ಎರಡು ಲಸಿಕೆಗಳು 2ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲಸಿಕೆಗಳು ಬೇಕು ಎಂದು 22 ದೇಶಗಳು ಭಾರತಕ್ಕೆ ಮನವಿ ಸಲ್ಲಿಸಿವೆ. ಇದರಲ್ಲಿ 15 ದೇಶಗಳಿಗೆ 61 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈವರೆಗೆ 22 ಸಾವು

ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವಾದಾಗಿನಿಂದ ಲಸಿಕೆ ಪಡೆದವರಲ್ಲಿ ದೇಶದಾದ್ಯಂತ 22 ಮಂದಿ ಮೃತಪಟ್ಟಿದ್ದಾರೆ. ಆದರೆ, 22ರಲ್ಲಿ ಒಬ್ಬರ ಸಾವೂ ಕೋವಿಡ್-19 ಲಸಿಕೆಯ ಕಾರಣದಿಂದ ಸಂಭವಿಸಿಲ್ಲ ಎಂಬುದನ್ನು ಪ್ರಯೋಗಾಲಯ ವರದಿಗಳು ದೃಢಪಡಿಸಿವೆ ಎಂದು ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

ಆಗ್ರಾದಲ್ಲಿ ಈಚೆಗೆ 77 ವರ್ಷದ ವ್ಯಕ್ತಿಯೊಬ್ಬರು ಲಸಿಕೆ ಪಡೆದ ವಾರದ ನಂತರ ಮೃತಪಟ್ಟಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದರು. ಮಧುಮೇಹದ ತೀವ್ರತೆ ಹೆಚ್ಚಾದ ಕಾರಣ ಅವರು ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಬೇರೆ ಸಾವುಗಳೂ ಇದೇ ರೀತಿಯ ಆರೋಗ್ಯದ ಸಮಸ್ಯೆಯಿಂದ ಸಂಭವಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫೈಜರ್ ಲಸಿಕೆಗಿಲ್ಲ ಅನುಮತಿ

ನವದೆಹಲಿ: ಭಾರತದಲ್ಲಿ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಫೈಝರ್ ಕಂಪನಿಯು ಶುಕ್ರವಾರ ವಾಪಸ್ ಪಡೆದಿದೆ. ಸುರಕ್ಷತೆಯ ಮಟ್ಟವನ್ನು ಪೂರೈಸದ ಕಾರಣ ಕಂಪನಿಯ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ದೊರೆತಿರಲಿಲ್ಲ. ಈ ಕಾರಣದಿಂದಲೇ ಕಂಪನಿ ತನ್ನ ಅರ್ಜಿಯನ್ನು ವಾಪಸ್ ಪಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕಂಪನಿಯ ಲಸಿಕೆಯನ್ನು ಪಡೆದವರಲ್ಲಿ ಹಲವರು ಗಂಭೀರ ಸ್ವರೂಪದ ಅಡ್ಡಪರಿಣಾಮಗಳನ್ನು ಎದುರಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಾವೂ ಸಂಭವಿಸಿದೆ. ಅಲ್ಲದೆ, ಕಂಪನಿಯು ಭಾರತೀಯರನ್ನು ಸಾಕಷ್ಟು ಸಂಖ್ಯೆಯಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT