ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂಲ್‌ಕಿಟ್‌ ಪ್ರಕರಣ: ಛತ್ತೀಸ್‌ಗಡ ಸರ್ಕಾರದ ಅರ್ಜಿಗಳನ್ನು ವಜಾಗೊಳಿಸಿದ ‘ಸುಪ್ರೀಂ’

ರಮಣ್‌ಸಿಂಗ್‌, ಸಂಬಿತ್ ಪಾತ್ರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ
Last Updated 22 ಸೆಪ್ಟೆಂಬರ್ 2021, 8:37 IST
ಅಕ್ಷರ ಗಾತ್ರ

ನವದೆಹಲಿ: ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್‌ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಅವರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಛತ್ತೀಸಗಡ ಸರ್ಕಾರ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಬುಧವಾರ ವಜಾಗೊಳಿಸಿತು.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿರುವ ನ್ಯಾಯಪೀಠ ಅರ್ಜಿಗಳ ವಿಚಾರಣೆ ನಡೆಸಿತು.

‘ಈ ಪ್ರಕರಣ ಕುರಿತು ಮೊದಲು ಛತ್ತೀಸ್‌ಗಡ ಹೈಕೋರ್ಟ್‌ ತನ್ನ ತೀರ್ಪು ಪ್ರಕಟಿಸಲಿ. ಟೂಲ್‌ಕಿಟ್‌ಗೆ ಸಂಬಂಧಿಸಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಹಲವರು ತಡೆಯಾಜ್ಞೆ ಪಡೆದಿದ್ದಾರೆ. ಹೀಗಾಗಿ ಛತ್ತೀಸ್‌ಗಡ ಹೈಕೋರ್ಟ್ ನೀಡಿರುವ ತಡೆಯಾಜ್ಞೆಗೆ ಪ್ರತ್ಯೇಕ ಆದ್ಯತೆ ನೀಡಬೇಕು ಏಕೆ’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ಅರ್ಜಿದಾರರು ರಾಜಕಾರಣಿಗಳು. ಎರಡು ರಾಜಕೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿಯೇ ಇಲ್ಲಿ ಪ್ರಮುಖವಾಗಿದೆ. ರಮಣ್‌ಸಿಂಗ್‌, ಸಂಬಿತ್‌ ಪಾತ್ರ ಅವರ ಟ್ವೀಟ್‌ಗಳು ಕಾಂಗ್ರೆಸ್‌ ಮುಖಂಡರನ್ನು ಕೆರಳುವಂತೆ ಮಾಡಿದ್ದರೂ, ಅವುಗಳಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಿಲ್ಲ ಎಂಬುದಾಗಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈಗ ಮತ್ತೆ ಹೈಕೋರ್ಟ್‌ ಮೊರೆ ಹೋಗುವುದರಲ್ಲಿ ಅರ್ಥವಿಲ್ಲ’ ಎಂದು ಛತ್ತೀಸ್‌ಗಡ ಸರ್ಕಾರ ಪರ ವಕೀಲ ಎ.ಎಂ.ಸಿಂಘ್ವಿ ವಾದಿಸಿದರು.

‘ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಾವು ಇಚ್ಛಿಸುವುದಿಲ್ಲ. ನಿಮ್ಮ ಶಕ್ತಿಯನ್ನು ಇಲ್ಲಿ ಹಾಳು ಮಾಡಿಕೊಳ್ಳಬೇಡಿ. ತ್ವರಿತವಾಗಿ ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸಲಾಗುವುದು’ ಎಂದ ನ್ಯಾಯಪೀಠ, ರಜಾಕಾಲದ ವಿಶೇಷ ಅರ್ಜಿಗಳನ್ನು (ಎಸ್‌ಎಲ್‌ಪಿ) ವಜಾಗೊಳಿಸಲಾಗಿದೆ ಎಂದೂ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT