ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ಭಿನ್ನಮತ: ನಾಯಕರನ್ನು ದೆಹಲಿಗೆ ಕರೆದ ಹೈಕಮಾಂಡ್‌

Last Updated 23 ಡಿಸೆಂಬರ್ 2021, 6:15 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ವ್ಯವಹಾರಗಳಲ್ಲಿ ನನಗೆ ಮುಕ್ತ ಅವಕಾಶಗಳಿಲ್ಲ ಎಂದು ಉತ್ತರಾಖಂಡದ ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್‌ ರಾವತ್‌ ಅವರು ಪಕ್ಷದ ನಾಯಕತ್ವದ ವಿರುದ್ಧ ನೀಡಿದ್ದ ಹೇಳಿಕೆಯು ದೆಹಲಿ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.

ಭಿನ್ನಮತದ ವಾಸನೆ ಹಿಡಿದ ಕಾಂಗ್ರೆಸ್ ಈಗ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತಿದೆ. ರಾಜ್ಯ ನಾಯಕರನ್ನು ಗುರುವಾರ ದೆಹಲಿಗೆ ಕರೆದಿದೆ. ಒಂದೆರೆಡು ದಿನದಲ್ಲಿ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯಲಿದ್ದು, ರಾವತ್ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಹಿಂದಿಯಲ್ಲಿ ಸರಣಿ ಟ್ವೀಟ್‌ ಮಾಡಿದ್ದ ರಾವತ್ ‘ಸಾಕಾಗಿ ಹೋಗಿದೆ, ಇದು ವಿಶ್ರಾಂತಿ ಪಡೆಯುವ ಸಮಯ,‘ ಎಂದು ಟ್ವೀಟ್‌ ಮಾಡಿದ್ದರು.

‘ಇದು ವಿಚಿತ್ರವಲ್ಲವೇ? ನಾವು ಚುನಾವಣೆಯ ಕಡಲಲ್ಲಿ ಈಜಬೇಕಾದಾಗ ಪಕ್ಷದ ನಾಯಕತ್ವ ನೆರವಿನ ಹಸ್ತ ಚಾಚಬೇಕು. ಆದರೆ, ಮುಖ ತಿರುಗಿಸಿಕೊಂಡು ನಕಾರಾತ್ಮಕ ಪತ್ರ ನಿರ್ವಹಿಸುತ್ತಿದೆ. ವಿರೋಧ ಪಕ್ಷವು ಮೊಸಳೆಗಳನ್ನೆ ಸಮುದ್ರಕ್ಕೆ ಬಿಟ್ಟಿರುವ ಸಂದರ್ಭದಲ್ಲಿ ನಾನು ಕೈಕಾಲು ಕಟ್ಟಿಸಿಕೊಂಡು ಈಜಾಡಬೇಕಾಗಿ ಬಂದಿದೆ. ಕೆಲವೊಮ್ಮೆ ನನಗೆ ಅನಿಸುತ್ತದೆ, ನಾನು ಬಹಳ ದುಡಿದುಬಿಟ್ಟಿದ್ದೇನೆ, ಈಗ ನನಗೆ ವಿಶ್ರಾಂತಿಯ ಬೇಕು ಎಂದು. ಸದ್ಯ ನಾನು ಸಂದಿಗ್ಧತೆಯಲ್ಲಿದ್ದೇನೆ. ಹೊಸ ವರ್ಷವು ನನಗೆ ದಾರಿ ತೋರಿಸಬಹುದು ಮತ್ತು ಕೇದಾರನಾಥನೇ ದಾರಿ ತೋರಬಹುದು,’ ಎಂದು ಅವರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾವತ್‌ ಹೀಗೆ ಟ್ವೀಟ್‌ ಮಾಡುತ್ತಲೇ ರಾಜ್ಯಾಧ್ಯಕ್ಷ ಗಣೇಶ್ ಗೊಂಡಿಯಾಲ್ ಅವರು ರಾಜ್ಯ ಉಸ್ತುವಾರಿ ದೇವೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹರೀಶ್ ರಾವತ್ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಗಾಗಿ ಸಾಮೂಹಿಕ ನಾಯಕತ್ವದೊಂದಿಗೆ ಹೊರಟಿರುವ ಕಾಂಗ್ರೆಸ್, ರಾವತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಲ್ಲ. ಇದು ಅವರ ಬೆಂಬಲಿಗರ ಪ್ರಮುಖ ಬೇಡಿಕೆಯೂ ಆಗಿದೆ.

ನಾರಾಯಣ್ ದತ್ ತಿವಾರಿ ಮತ್ತು ಇಂದಿರಾ ಹೃದಯೇಶ್ ಅವರ ನಿಧನದ ನಂತರ ಉತ್ತರಾಖಂಡದಲ್ಲಿ ಇಡೀ ರಾಜ್ಯದ ಮೇಲೆ ಪ್ರಭಾವ ಹೊಂದಿರವ ನಾಯಕ ರಾವತ್‌ ಮಾತ್ರ. ಅವರ ಹೊರತಾಗಿ ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ಬೇರೆ ಆಯ್ಕೆಗಳಿಲ್ಲ. ರಾವತ್‌ ಏನಾದರೂ ಮುನಿಸಿಕೊಂಡರೆ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ.

ರಾಜ್ಯ ಉಸ್ತುವಾರಿ ತಮ್ಮ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಅಸಮಾಧಾನ ರಾವತ್‌ ಅವರಿಗೆ ಇದೆ ಎಂದು ಬೆಂಬಲಿಗರು ಹೇಳಿದ್ದಾರೆ.

ಪಂಜಾಬ್‌ನ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದಾಗ ರಾವತ್ ಅವರು ಅಲ್ಲಿನ ಉಸ್ತುವಾರಿಯಾಗಿದ್ದರು. ಹೊಸ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ರಾವತ್ ಅಮರಿಂದರ್‌ ಸಿಂಗ್‌ಗೆ ಸಲಹೆ ನೀಡಿದ್ದರು. ಆದರೆ, ಈಗ ಹರೀಶ್‌ ರಾವತ್‌ ಅವರೇ ಪಕ್ಷದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT